ವಾಷಿಂಗ್ಟನ್: ಮುಂದಿನ ತಿಂಗಳ 20ರಂದು ಅಧ್ಯಕ್ಷ ಸ್ಥಾನ ತೊರೆಯಲಿರುವ ಜೋ ಬೈಡನ್ ಅವರು ಎಚ್–1ಬಿ ವೀಸಾ ನಿಯಮಗಳನ್ನು ಪರಿಷ್ಕರಿಸಿದ್ದು, ಇದರಿಂದ ಅಮೆರಿಕದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಸುಲಭವಾಗಲಿದೆ.
ಬೈಡನ್ ಅವರು ಮಂಗಳವಾರ ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಎಫ್–1 ವಿದ್ಯಾರ್ಥಿ ವೀಸಾವನ್ನು ಎಚ್–1ಬಿ ವೀಸಾಗೆ ಪರಿವರ್ತನೆಗೊಳಿಸುವ ವಿಧಾನವೂ ಸರಳವಾಗಲಿದೆ.
2025ರ ಜ.20ರಂದು ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ತಮ್ಮ ಅವಧಿ ಇನ್ನೊಂದು ತಿಂಗಳು ಇರುವ ಬೆನ್ನಲ್ಲೇ ಬೈಡನ್ ಅವರು ನೂತನ ನಿಯಮಗಳನ್ನು ಪ್ರಕಟಿಸಿದ್ದಾರೆ.
ಎಚ್–1ಬಿ ವೀಸಾ ನೀಡಲು ನಿಗದಿಪಡಿಸಿದ್ದ ಮಾನದಂಡವನ್ನು ಪರಿಷ್ಕರಿಸಿದ್ದು, ಲಾಭರಹಿತ ಮತ್ತು ಸರ್ಕಾರಿ ಸಂಶೋಧನಾ ಸಂಸ್ಥೆಗಳು ಅಗತ್ಯಕ್ಕೆ ತಕ್ಕಂತೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬಹುದು. ಅಂತಹವರಿಗೆ ನೀಡುವ ಎಚ್–1ಬಿ ವೀಸಾಗೆ ಯಾವುದೇ ಮಿತಿ ಇರುವುದಿಲ್ಲ.
ಈ ಬಗ್ಗೆ ಪ್ರಕಟಣೆ ನೀಡಿರುವ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ, ‘ಅಮೆರಿಕದ ಉದ್ಯೋಗದಾತರು ತಮ್ಮ ವ್ಯಾಪಾರದ ಆದ್ಯತೆಗಳಿಗೆ ಅನುಗುಣವಾಗಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಸ್ಪರ್ಧೆಯಲ್ಲಿ ಉಳಿಯಲು ಈ ಬದಲಾವಣೆಯಿಂದ ಅನುಕೂಲವಾಗಲಿದೆ’ ಎಂದು ತಿಳಿಸಿದೆ.
ಎಫ್–1 ವೀಸಾ ಹೊಂದಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳನ್ನು ಪಡೆಯಲು ಆಗುತ್ತಿರುವ ಅಡಚಣೆಗಳನ್ನು ತಪ್ಪಿಸಲು, ಎಫ್–1 ವೀಸಾವನ್ನು ಎಚ್–1ಬಿಗೆ ಪರಿವರ್ತನೆ ಮಾಡಿಕೊಳ್ಳುವುದು ಸುಲಭವಾಗಲಿದೆ.
ಈಗಾಗಲೇ ಎಚ್–1ಬಿ ವೀಸಾ ನೀಡಲು ಅನುಮೋದನೆ ಆಗಿರುವ ಅರ್ಜಿಗಳನ್ನು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯಲ್ಲಿ (ಯುಎಸ್‌ಸಿಐಎಸ್) ತ್ವರಿತವಾಗಿ ಇತ್ಯರ್ಥಗೊಳಿಸಲಾಗುತ್ತದೆ.
ಕಾನೂನಿನ ಅಡಿಯಲ್ಲಿ ತಮ್ಮ ಸಿಬ್ಬಂದಿಯ ರಕ್ಷಣೆಗೆ ಬದ್ಧವಾಗಿರುವ ಅಮೆರಿಕದ ಉದ್ಯೋಗದಾತ ಸಂಸ್ಥೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಹಾಗೂ ಸಿಬ್ಬಂದಿಯ ಅಗತ್ಯಗಳನ್ನು ಪೂರೈಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಬೈಡನ್ ಸರ್ಕಾರದ ಹಿಂದಿನ ಪ್ರಯತ್ನಗಳಿಗೆ ಪೂರಕವಾಗಿ ಹೊಸ ನಿಯಮ ತರಲಾಗಿದೆ ಎಂದೂ ಅದು ಮಾಹಿತಿ ನೀಡಿದೆ.
‘ಜಾಗತಿಕವಾಗಿ ನುರಿತ ಪ್ರತಿಭಾವಂತರನ್ನು ನೇಮಿಸಿಕೊಳ್ಳಲು ಅಮೆರಿಕದ ಎಲ್ಲಾ ಉದ್ಯೋಗದಾತರು ಎಚ್–1ಬಿ ವೀಸಾವನ್ನು ಅವಲಂಭಿಸಿದ್ದು, ಹೊಸ ನಿಯಮದಿಂದ ದೇಶದಲ್ಲಿನ ಉದ್ಯೋಗದಾತರಿಗೆ ಅನುಕೂಲವಾಗಲಿದೆ’ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿಯ ಅಲೇಜಂದ್ರೊ ಎನ್. ಮಯೋರ್ಕಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.