ADVERTISEMENT

ರಷ್ಯಾ ಮೇಲೆ ಪಾಶ್ಚಿಮಾತ್ಯ ಹಣಕಾಸು ನಿರ್ಬಂಧ ಘೋಷಿಸಿದ ಅಮೆರಿಕ

ಪಿಟಿಐ
Published 23 ಫೆಬ್ರುವರಿ 2022, 3:15 IST
Last Updated 23 ಫೆಬ್ರುವರಿ 2022, 3:15 IST
   

ವಾಷಿಂಗ್ಟನ್: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಕ್ರಮಣಕಾರಿ ವರ್ತನೆ ತೋರುತ್ತಿದ್ದಾರೆ ಎಂದು ದೂಷಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ರಷ್ಯಾ ವಿರುದ್ಧ ಸರಣಿ ನಿರ್ಬಂಧಗಳನ್ನು ಘೋಷಿಸಿದ್ದಾರೆ.

ರಷ್ಯಾ ವಿರುದ್ಧ ಅಮೆರಿಕದ ಮೊದಲ ಆರ್ಥಿಕ ನಿರ್ಬಂಧಗಳನ್ನು ಘೋಷಿಸಿ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಷ್ಯಾ ಆಕ್ರಮಣಕಾರಿ ಎಂಬುದರಲ್ಲಿ ಯಾವುದೇ ಅನುಮಾ ಇಲ್ಲ. ಆದ್ದರಿಂದ, ನಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಾವು ಸ್ಪಷ್ಟವಾದ ದೃಷ್ಟಿ ನೆಟ್ಟಿದ್ದೇವೆ’ ಎಂದು ಹೇಳಿದರು.

ಪೂರ್ವ ಉಕ್ರೇನ್‌ನ ಎರಡು ಪ್ರದೇಶಗಳನ್ನು ಸ್ವತಂತ್ರವೆಂದು ಘೋಷಿಸಲು ಮುಂದಾಗಿದ್ದ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬೈಡನ್, ನಿರ್ಬಂಧ ಹೇರುವ ಸೂಚನೆ ನೀಡಿದ್ದರು.

ADVERTISEMENT

‘ಸೋಮವಾರ ರಾತ್ರಿ, ಪುಟಿನ್ ಈ ಪ್ರದೇಶಗಳಲ್ಲಿ ರಷ್ಯಾದ ಪಡೆಗಳನ್ನು ನಿಯೋಜಿಸಿದ್ದಾರೆ. ನನ್ನ ದೃಷ್ಟಿಯಲ್ಲಿ ಅವರು ಬಲವಂತವಾಗಿ ಹೆಚ್ಚಿನ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾವು ಕಳೆದ ರಾತ್ರಿಯ ಅವರ ಭಾಷಣವನ್ನು ಕೇಳಿದರೆ, ಅವರು ಮತ್ತಷ್ಟು ಮುಂದುವರಿಯಲು ಪ್ರಯತ್ನಿಸುತ್ತಿದ್ದಾರೆ. ಇದು ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದ ಆರಂಭ ಎಂಬುದು ಸ್ಪಷ್ಟ’ ಎಂದು ಅವರು ಹೇಳಿದರು.

ಈ ನಿರ್ಬಂಧಗಳನ್ನು ಅಮೆರಿಕದ ಮಿತ್ರರಾಷ್ಟ್ರಗಳು ಮತ್ತು ಪಾಲುದಾರ ದೇಶಗಳೊಂದಿಗೆ ನಿಕಟವಾಗಿ ಸಂಯೋಜಿಸಲಾಗಿದೆ. ರಷ್ಯಾದಿಂದ ಆಕ್ರಮಣಕಾರಿ ವರ್ತನೆ ಉಲ್ಬಣಗೊಂಡರೆ ನಿರ್ಬಂಧಗಳನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತೇವೆ ಎಂದು ಬೈಡನ್ ಹೇಳಿದರು.

‘ನಾವು ರಷ್ಯಾದಎರಡು ದೊಡ್ಡ ಹಣಕಾಸು ಸಂಸ್ಥೆಗಳಾದ ವಿಇಬಿ ಮತ್ತು ಅವರ ಮಿಲಿಟರಿ ಬ್ಯಾಂಕ್‌ಗಳ ಮೇಲೆ ಪೂರ್ಣ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದ್ದೇವೆ. ನಾವು ರಷ್ಯಾದ ಸಾರ್ವಭೌಮ ಸಾಲದ ಮೇಲೆ ಸಮಗ್ರ ನಿರ್ಬಂಧಗಳನ್ನು ಹೇರುತ್ತಿದ್ದೇವೆ. ಇದರರ್ಥ, ನಾವು ರಷ್ಯಾದ ಸರ್ಕಾರಕ್ಕೆ ಪಾಶ್ಚಿಮಾತ್ಯ ಹಣಕಾಸು ಸೌಲಭ್ಯವನ್ನು ಕಡಿತಗೊಳಿಸಿದ್ದೇವೆ. ಇನ್ನು ಮುಂದೆ ರಷ್ಯಾಗೆ ಪಾಶ್ಚಾತ್ಯ ದೇಶಗಳಿಂದ ಹಣಕಾಸು ನೆರವು ಸಿಗುವುದಿಲ್ಲ ಮತ್ತು ನಮ್ಮ ಮಾರುಕಟ್ಟೆಗಳಲ್ಲಿ ಅಥವಾ ಯುರೋಪಿಯನ್ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

'ನಾಳೆಯಿಂದ, ನಾವು ರಷ್ಯಾದ ಗಣ್ಯರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ನಿರ್ಬಂಧ ವಿಧಿಸುತ್ತೇವೆ. ರಷ್ಯಾ ನೀತಿಗಳ ಭ್ರಷ್ಟ ಲಾಭಗಳನ್ನು ಅನುಭವಿಸಿದ ಅವರು, ನೋವನ್ನೂ ಹಂಚಿಕೊಳ್ಳಬೇಕು. ರಷ್ಯಾಗೆ ನೀಡಿದ ನಾರ್ಡ್ ಸ್ಟ್ರೀಮ್ 2 ಮುಂದುವರಿಯದಂತೆ ನೋಡಿಕೊಳ್ಳಲು ನಾವು ಜರ್ಮನಿಯೊಂದಿಗೆ ಮಾತನಾಡುತ್ತೇವೆ’ ಎಂದು ಬೈಡನ್ ಹೇಳಿದರು.

‘ರಷ್ಯಾ ತನ್ನ ಮುಂದಿನ ನಡೆಯನ್ನು ಆಲೋಚಿಸುತ್ತಿರುವಂತೆ, ನಮ್ಮ ಮುಂದಿನ ನಡೆಯನ್ನು ನಾವು ಸಿದ್ಧಪಡಿಸಿದ್ದೇವೆ’ ಎಂದು ಅವರು ಹೇಳಿದರು.

ತನ್ನ ಆಕ್ರಮಣವನ್ನು ಮುಂದುವರಿಸಿದರೆ ರಷ್ಯಾವು ಹೆಚ್ಚುವರಿ ನಿರ್ಬಂಧಗಳನ್ನು ಒಳಗೊಂಡಂತೆ ಇನ್ನೂ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.