ADVERTISEMENT

ಆಡಳಿತದ ಮೊದಲ ನೂರು ದಿನಗಳಲ್ಲಿ 10 ಕೋಟಿ ಜನರಿಗೆ ಲಸಿಕೆ

ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಪ್ರಕಟಣೆ

ಪಿಟಿಐ
Published 16 ಜನವರಿ 2021, 8:29 IST
Last Updated 16 ಜನವರಿ 2021, 8:29 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್‌: ತಮ್ಮ ಆಡಳಿತದ ಮೊದಲ ನೂರು ದಿನಗಳಲ್ಲಿ 10 ಕೋಟಿ ಅಮೆರಿಕನ್ನರಿಗೆ ಕೋವಿಡ್‌ 19 ಲಸಿಕೆ ಹಾಕಿಸುವುದಾಗಿ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಪ್ರಕಟಿಸಿದ್ದಾರೆ.

ಜ.20ರಂದು ನಡೆಯುವ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ತಮ್ಮ ತಂಡದೊಂದಿಗೆ ನಡೆಸಿದ ಮಾತುಕತೆಯಲ್ಲಿ ಅವರು, ಕಳೆದ ಒಂದು ವರ್ಷದಿಂದ ರಾಷ್ಟ್ರವನ್ನು ಕಾಡುತ್ತಿರುವ ಈ ಪ್ರಮುಖ ಆರೋಗ್ಯದ ಬಿಕ್ಕಟ್ಟನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿದರು.

ಡೆಲ್‌ವೇರ್‌ನ ವಿಲ್ಮಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಮೆರಿಕದಲ್ಲಿ ಕೋವಿಡ್‌ ಲಸಿಕೆ ಹಾಕುವ ವಿಚಾರದಲ್ಲಿ ಇಲ್ಲಿವರೆಗೂ ಸಮರ್ಪಕವಾದ ಕೆಲಸಗಳು ನಡೆದಿಲ್ಲ. ಇದೊಂದು ವೈಫಲ್ಯ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಐದು ವಿಚಾರಗಳನ್ನು ಚರ್ಚಿಸಿದ್ದೇವೆ. ಅದರಲ್ಲಿ ನಮ್ಮ ಆಡಳಿತದ ನೂರು ದಿನಗಳ ಒಳಗೆ 10 ಕೋಟಿ ಅಮೆರಿಕನ್ನರಿಗೆ ಲಸಿಕೆ ಹಾಕಿಸುವ ಗುರಿಯೂ ಒಂದು’ ಎಂದು ಹೇಳಿದರು.

ADVERTISEMENT

ಅಮೆರಿಕದಲ್ಲಿ 2.3 ಕೋಟಿ ಜನರಿಗೆ ಸೋಂಕು ತಗುಲಿದ್ದು, 3.91 ಲಕ್ಷ ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅತಿ ಹೆಚ್ಚು ಕೊರೊನಾ ಸೋಂಕು ತಗುಲಿದ ರಾಷ್ಟ್ರಗಳಲ್ಲಿ ಅಮೆರಿಕ ವಿಶ್ವದಲ್ಲೇ ಅಗ್ರ ಸ್ಥಾನದಲ್ಲಿದೆ. ಜೋ ಬೈಡನ್ ಅವರು, ತಮ್ಮ ಚುನಾವಣಾ ಪ್ರಚಾರದ ವೇಳೆಯಲ್ಲೂ ಕೊರೊನಾ ಸೋಂಕು ನಿಯಂತ್ರಣದ ಬಗ್ಗೆ ಹೆಚ್ಚು ಪ್ರಸ್ತಾಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.