ADVERTISEMENT

ಲಾಸ್‌ ಏಂಜಲೀಸ್‌ನ ಮೇಯರ್‌ ಎರಿಕ್ ಗಾರ್ಸೆಟ್ಟಿ ಭಾರತಕ್ಕೆ ಅಮೆರಿಕದ ರಾಯಭಾರಿ

ಪಿಟಿಐ
Published 10 ಜುಲೈ 2021, 2:34 IST
Last Updated 10 ಜುಲೈ 2021, 2:34 IST
ಅಮೆರಿಕ ಅಧ್ಯಕ್ಷರೊಂದಿಗೆ ಎರಿಕ್ ಗಾರ್ಸೆಟ್ಟಿ
ಅಮೆರಿಕ ಅಧ್ಯಕ್ಷರೊಂದಿಗೆ ಎರಿಕ್ ಗಾರ್ಸೆಟ್ಟಿ   

ವಾಷಿಂಗ್ಟನ್: ಲಾಸ್ ಏಂಜಲೀಸ್‌ನ ಮೇಯರ್ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನೇಮಕ ಮಾಡಿ ಅಧ್ಯಕ್ಷ ಜೋ ಬೈಡನ್‌ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ರಾಯಭಾರಿಯಾಗಿದ್ದ ಕೆನೆತ್‌ ಜೆಸ್ಟರ್‌ ಅವರ ಸ್ಥಾನವನ್ನು ಗಾರ್ಸೆಟ್ಟಿ ತುಂಬಲಿದ್ದಾರೆ ಎಂದು ಶ್ವೇತ ಭವನ ಅಧಿಕೃತವಾಗಿ ಘೋಷಿಸಿದೆ.

ಗಾರ್ಸೆಟ್ಟಿ ಅವರ ನೇಮಕವನ್ನು ಭಾರತ ಮೂಲದ ಅಮೆರಿಕ ಸಂಸದರು ಸ್ವಾಗತಿಸಿದ್ದಾರೆ.

ADVERTISEMENT

ಭಾರತಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಗಾರ್ಸೆಟ್ಟಿ, ಇದು ನನಗೆ ಸಿಕ್ಕ ಗೌರವ ಎಂದಿದ್ದಾರೆ. ಅಲ್ಲದೆ ಲಾಸ್‌ ಏಂಜಲೀಸ್‌ ಮೇಯರ್‌ ಆಗಿದ್ದಾಗಿನ ಅದೇ ಶಕ್ತಿ, ಬದ್ಧತೆ ಹಾಗೂ ಪ್ರೀತಿಯನ್ನು ಹೊಸ ಜವಾಬ್ದಾರಿಯಲ್ಲೂ ಆಳವಡಿಸುವುದಾಗಿ ತಿಳಿಸಿದ್ದಾರೆ.

ಎರಿಕ್ ಗಾರ್ಸೆಟ್ಟಿ, 2013ರಿಂದ ಲಾಸ್ ಏಂಜಲೀಸ್‌ನ ಮೇಯರ್ ಆಗಿದ್ದಾರೆ. ಸಿಟಿ ಕೌನ್ಸಿಲ್ ಸದಸ್ಯರಾಗಿ 12 ವರ್ಷ ಹಾಗೂ ಆರು ಬಾರಿ ಕೌನ್ಸಿಲ್ ಅಧ್ಯಕ್ಷರಾಗಿದ್ದರು.

ಮೇಯರ್ ಆಗಿ ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಹಾಗೂ ಅತಿ ನಿಬಿಡ ಸರಕು ಸಾಗಣೆ ಬಂದರಿನ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಮೂರುದಶಕದಬಳಿಕ ಅಮೆರಿಕದಲ್ಲಿ ಒಲಿಂಪಿಕ್ ಕ್ರೀಡಾಕೂಟ ಆಯೋಜನೆಯಾಗಿ ಯಶಸ್ವಿಯಾಗಿ ಬಿಡ್ ಸಲ್ಲಿಸಲು ಮಹತ್ವದ ಪಾತ್ರ ವಹಿಸಿದ್ದರು.

'ಕ್ಲೈಮೇಟ್ ಮೇಯರ್ಸ್' ಸಹ ಸ್ಥಾಪಕರಾದ ಗಾರ್ಸೆಟ್ಟಿ, ಅಮೆರಿಕದ 400ಕ್ಕೂ ಹೆಚ್ಚು ಮೇಯರ್‌ಗಳು ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಸ್ವೀಕರಿಸಲು ಕಾರಣರಾದರು. ಅವರು ಅಮೆರಿಕ ನೌಕಾಪಡೆಯಲ್ಲಿ 12 ವರ್ಷಗಳ ಕಾಲ ಗುಪ್ತಚರ ಅಧಿಕಾರಿಯಾಗಿದ್ದರು.

ಗಾರ್ಸೆಟ್ಟಿ, ಕ್ವೀನ್ಸ್ ಕಾಲೇಜ್, ಆಕ್ಸ್‌ಫರ್ಡ್ ಮತ್ತು 'ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಆ್ಯಂಡ್ ಪೊಲಿಟಿಕಲ್ ಸೈನ್ಸ್‌‌'ನಲ್ಲಿ ಅಧ್ಯಯನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.