ADVERTISEMENT

ಆಫ್ಗಾನ್‌ನಿಂದ ಸೇನೆ ಹಿಂತೆಗೆದುಕೊಳ್ಳುವ ಯೋಜನೆಯಲ್ಲಿ ಬದಲಾವಣೆ ಇಲ್ಲ: ಬೈಡನ್

ಪಿಟಿಐ
Published 11 ಆಗಸ್ಟ್ 2021, 3:18 IST
Last Updated 11 ಆಗಸ್ಟ್ 2021, 3:18 IST
ಅಮೆರಿಕ ಅಧ್ಯಕ್ಷ ಜೋ ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡನ್    

ವಾಷಿಂಗ್ಟನ್: ಅಫ್ಗಾನಿಸ್ತಾನದ ಹೆಚ್ಚಿನ ಭಾಗಗಳ ಮೇಲೆ ತಾಲಿಬಾನ್ ಹಿಡಿತ ಸಾಧಿಸುತ್ತಿರುವ ಹೊರತಾಗಿಯೂ ಅಲ್ಲಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವ ಯೋಜನೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಸೆಪ್ಟೆಂಬರ್ 11ರ ಒಳಗೆ ಅಫ್ಗಾನಿಸ್ತಾನದಿಂದ ಎಲ್ಲಾ ಅಮೆರಿಕ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಅವರು ಆದೇಶಿಸಿದ್ದಾರೆ. ಈಗಾಗಲೇ ಶೇಕಡ 90ಕ್ಕಿಂತಲೂ ಹೆಚ್ಚಿನ ಸೈನಿಕರನ್ನು ಯುದ್ಧಪೀಡಿತ ಅಫ್ಗಾನಿಸ್ತಾನದಿಂದ ಹಿಂತೆಗೆದುಕೊಂಡಿರುವುದಾಗಿ ಪೆಂಟಗನ್ ತಿಳಿಸಿದೆ.

ಆಫ್ಗನ್‌ನಿಂದ ಸೇನೆ ಹಿಂತೆಗೆದುಕೊಳ್ಳುವ ತಮ್ಮ ಯೋಜನೆ ಬದಲಾಗಬಹುದೇ ಎಂದು ಶ್ವೇತಭವನದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ನೋ’ ಎಂದು ಜೋ ಬೈಡನ್ ಉತ್ತರಿಸಿದ್ದಾರೆ. ‘ನೋಡಿ, ನಾವು 20 ವರ್ಷಗಳಲ್ಲಿ ಅದಕ್ಕಾಗಿ ಒಂದು ಟ್ರಿಲಿಯನ್ ಡಾಲರ್‌ ಹಣವನ್ನು ಖರ್ಚು ಮಾಡಿದ್ದೇವೆ. ನಾವು 3,00,000ಕ್ಕೂ ಹೆಚ್ಚು ಆಫ್ಗಾನ್ ಪಡೆಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸಿದ್ದೇವೆ. ಅಮೆರಿಕದ ಸಾವಿರಾರು ಯೋಧರನ್ನು ಕಳೆದುಕೊಂಡಿದ್ದೇವೆ ಮತ್ತು ಕೆಲವರು ಗಂಭೀರ ಗಾಯಗೊಂಡಿದ್ದಾರೆ. ಹಾಗಾಗಿ, ಅಫ್ಘಾನ್ ನಾಯಕರು ಒಗ್ಗೂಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ADVERTISEMENT

ಆದರೆ, ಆಫ್ಗನ್‌ನ ವಾಯುಪಡೆ ಸಮರ್ಥವಾಗುವವರೆಗೂ ಅವರ ವಾಯುಪಡೆಗೆ ನಮ್ಮ ಬೆಂಬಲ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಅವರ ವಾಯುಪಡೆ ಸಂಖ್ಯೆಯಲ್ಲಿ ತಾಲಿಬಾನ್‌ಗಿಂತಲೂ ಹೆಚ್ಚಿದೆ ಎಂದು ಬೈಡನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.