ADVERTISEMENT

15 ಮಹತ್ವದ ಕಾರ್ಯಾದೇಶಗಳಿಗೆ ಬೈಡನ್‌ ಸಹಿ

ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣ ಸ್ಥಗಿತ, ಪ್ಯಾರಿಸ್‌ ಒಪ್ಪಂದಕ್ಕೆ ಮತ್ತೆ ಸೇ‌ರ್ಪಡೆ

ಪಿಟಿಐ
Published 21 ಜನವರಿ 2021, 5:59 IST
Last Updated 21 ಜನವರಿ 2021, 5:59 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಜೋ ಬೈಡನ್‌ 15 ಮಹತ್ವದ ಕಾರ್ಯಾದೇಶಗಳಿಗೆ ಸಹಿ ಹಾಕಿದ್ದಾರೆ.

ವಿದೇಶಾಂಗ ನೀತಿಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೈಗೊಂಡಿದ್ದ ಹಲವು ನಿರ್ಧಾರಗಳನ್ನು ಬೈಡನ್‌ ಬದಲಾಯಿಸಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿದಿದ್ದ ನಿರ್ಧಾರವನ್ನು ಬದಲಿಸಿದ್ದು, ಮರು ಸೇರ್ಪಡೆಗೆ ಸಹಿ ಹಾಕಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಮರು ಸೇರ್ಪಡೆಯ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ, ಮುಸ್ಲಿಮರ ಸಂಚಾರಕ್ಕೆ ವಿಧಿಸಲಾಗಿದ್ದ ನಿಷೇಧ ರದ್ದುಪಡಿಸಲಾಗಿದೆ ಹಾಗೂ ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣವನ್ನು ಸ್ಥಗಿತಗೊಳಿಸುವ ಆದೇಶಕ್ಕೆ ಸಹಿ ಹಾಕಲಾಗಿದೆ.

ADVERTISEMENT

ಇನ್ನೂ ಕನಿಷ್ಠ 100 ದಿನಗಳ ಕಾಲ ಕಡ್ಡಾಯವಾಗಿ ಅಮೆರಿಕನ್ನರು ಮಾಸ್ಕ್‌ ಧರಿಸಬೇಕು ಎನ್ನುವ ಕಾರ್ಯಾದೇಶಕ್ಕೆ ಸಹಿ ಹಾಕಲಾಗಿದೆ

‘ಇಂದಿನ ಕಾರ್ಯಾದೇಶಗಳ ಬಗ್ಗೆ ನನಗೆ ಹೆಮ್ಮೆ ಇದೆ. ಅಮೆರಿಕದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದೇನೆ. ಇನ್ನೂ ಬಹಳಷ್ಟು ಕಾರ್ಯಗಳಿವೆ. ಅವು ಮಹತ್ವದ್ದಾಗಿವೆ. ಹಲವು ಕಾರ್ಯಗಳಿಗೆ ಶಾಸನಬದ್ಧ ಅನುಮೋದನೆ ಪಡೆಯಬೇಕಾಗಿದೆ’ ಎಂದು ಬೈಡನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ಇನ್ನೂ ಹಲವು ಕಾರ್ಯಾದೇಶಗಳಿಗೆ ಸಹಿ ಹಾಕುತ್ತೇನೆ. ಜತೆಗೆ, ಕೋವಿಡ್‌–19ನಿಂದ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳ ಬಗ್ಗೆಯೂ ಯೋಜನೆ ರೂಪಿಸಲಾಗುವುದು. ಜತೆಗೆ, ಆರ್ಥಿಕ ಬಿಕ್ಕಟ್ಟು, ಹವಾಮಾನ ಬಿಕ್ಕಟ್ಡು ಮತ್ತು ವರ್ಣ ಸಮಾನತೆಯ ವಿಷಯಗಳ ಬಗ್ಗೆಯೂ ಗಮನ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದಾಗಿ ಡೊನಾಲ್ಡ್‌ ಟ್ರಂಪ್‌ ಅವರು ಕೈಗೊಂಡಿದ್ದ ನಿರ್ಧಾರವನ್ನು ರದ್ದುಪಡಿಸಿರುವುದರಿಂದ ಕೊರೊನಾ ವೈರಸ್‌ ಸಾಂಕ್ರಾಮಿಕ ನಿಯಂತ್ರಿಸಲು ಸಾಧ್ಯವಾಗಲಿದೆ’ ಎಂದು ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಜೆನ್‌ ಸಾಕಿ ತಿಳಿಸಿದ್ದಾರೆ.

‘ವಲಸೆ ಮಸೂದೆಯನ್ನು (ಅಮೆರಿಕ ಪೌರತ್ವ ಕಾಯ್ದೆ –2021) ಸಂಸತ್‌ಗೆ ಕಳುಹಿಸಲು ಬೈಡನ್‌ ನಿರ್ಧರಿಸಿದ್ದಾರೆ. ಇದರಿಂದ ವಲಸೆ ನೀತಿಯಲ್ಲಿ ಹಲವಾರು ಬದಲಾವಣೆಗಳಾಗಲಿವೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.