ADVERTISEMENT

ಸಾವಿರಾರು ಜನರ ಎದುರು ಸಲಿಂಗ ವಿವಾಹ ಕಾನೂನಿಗೆ ಸಹಿ ಹಾಕಿದ ಜೋ ಬೈಡನ್

ಪಿಟಿಐ
Published 14 ಡಿಸೆಂಬರ್ 2022, 2:48 IST
Last Updated 14 ಡಿಸೆಂಬರ್ 2022, 2:48 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಲಿಂಗ ವಿವಾಹ ಕಾನೂನಿಗೆ ಸಹಿ ಹಾಕಿದರು. ಬೈಡನ್ ಸಹಿ ಹಾಕುವುದನ್ನು ವೀಕ್ಷಿಸಲು ಮಂಗಳವಾರ ಮಧ್ಯಾಹ್ನ ಸಾವಿರಾರು ಮಂದಿ ಶ್ವೇತಭವನದಲ್ಲಿ ಸೇರಿದ್ದರು. ಬಳಿಕ ಸಂಭ್ರಮಾಚರಣೆ ಮಾಡಿದರು.

‘ಈ ಕಾನೂನು ಮತ್ತು ಅದು ರಕ್ಷಿಸುವ ಪ್ರೀತಿಯು ಸಲಿಂಗ ವಿವಾಹವನ್ನು ದ್ವೇಷಿಸುವವರ ವಿರುದ್ಧದ ಪ್ರತಿರೋಧವಾಗಿದೆ. ಅದಕ್ಕಾಗಿಯೇ ಈ ಕಾನೂನು ಪ್ರತಿಯೊಬ್ಬ ಅಮೆರಿಕನ್ನರಿಗೂ ಮುಖ್ಯವಾಗಿದೆ.’ಎಂದು ಶ್ವೇತಭವನದ ಸೌತ್ ಲಾನ್‌ನಲ್ಲಿ ಬೈಡನ್ ಹೇಳಿದರು.

ಗಾಯಕರಾದ ಸ್ಯಾಮ್ ಸ್ಮಿತ್ ಮತ್ತು ಸಿಂಡಿ ಲಾಪರ್ ಹಾಡಿನ ಮೂಲಕ ಅಮೆರಿಕ ಅಧ್ಯಕ್ಷರ ಈ ನಡೆಯನ್ನು ಶ್ಲಾಘಿಸಿದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಲಿಂಗ ವಿವಾಹವನ್ನು ನೆರವೇರಿಸಿದರು.

ADVERTISEMENT

ಈ ಮಧ್ಯೆ, ಒಂದು ದಶಕದ ಹಿಂದೆ ಬೈಡನ್ ನೀಡಿದ್ದ ದೂರದರ್ಶನ ಸಂದರ್ಶನದ ವಿಡಿಯೊವನ್ನು ಶ್ವೇತಭವನದಲ್ಲಿ ಪ್ರದರ್ಶಿಸಲಾಯಿತು. ಆ ಸಂದರ್ಶನದಲ್ಲಿ ಬೈಡನ್ ಸಲಿಂಗ ವಿವಾಹಕ್ಕೆ ತಮ್ಮ ಬೆಂಬಲವನ್ನು ಅನಿರೀಕ್ಷಿತವಾಗಿ ವ್ಯಕ್ತಪಡಿಸುವ ಮೂಲಕ ರಾಜಕೀಯ ಕೋಲಾಹಲವನ್ನು ಉಂಟುಮಾಡಿದ್ದರು. ಆ ಸಮಯದಲ್ಲಿ ಬೈಡನ್ ಉಪಾಧ್ಯಕ್ಷರಾಗಿದ್ದರು. ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಸಲಿಂಗ ವಿವಾಹಕ್ಕೆ ಇನ್ನೂ ಬೆಂಬಲ ವ್ಯಕ್ತಪಡಿಸಿರಲಿಲ್ಲ.

ಈ ವೇಳೆ ‘ನಾನು ತೊಂದರೆಗೆ ಸಿಲುಕಿದೆ’ಎಂದು ಸಂದರ್ಶನದಲ್ಲಿ ಬೈಡನ್ ತಮಾಷೆ ಮಾಡಿದ್ದರು. ಅದಾದ ಮೂರು ದಿನಗಳ ಬಳಿಕ ಬರಾಕ್ ಒಬಾಮ, ಸಾರ್ವಜನಿಕವಾಗಿ ಸಲಿಂಗ ವಿವಾಹವನ್ನು ಅನುಮೋದಿಸಿದ್ದರು.

ಅಮೆರಿಕದ ಎರಡೂ ಪಕ್ಷಗಳ ಸಂಸದರು ಮಂಗಳವಾರದ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದು ಒಂದೊಮ್ಮೆ ದೇಶದ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದಾಗಿದ್ದ ಸಲಿಂಗ ವಿವಾಹದ ಬಗ್ಗೆ ಹೆಚ್ಚುತ್ತಿರುವ ಸ್ವೀಕಾರವನ್ನು ಪ್ರತಿಬಿಂಬಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.