ಜೊ ಬೈಡೆನ್, ಅಮೆರಿಕದ ಮಾಜಿ ಅಧ್ಯಕ್ಷ
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಶ್ವೇತಭವನದಿಂದ ನಿರ್ಗಮಿಸಿದ ಬಳಿಕ ತಮ್ಮ ಮೊದಲ ಭಾಷಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ಕಟುವಾಗಿ ಟೀಕಿಸಿದ್ದಾರೆ.
ಸರ್ಕಾರಿ ಉದ್ಯೋಗಿಗಳ ನಿವೃತ್ತಿ ನಂತರದ ಪ್ರಯೋಜನಗಳನ್ನು ಕಡಿತಗೊಳಿಸುವ ಟ್ರಂಪ್ ಆಡಳಿತದ ನಿರ್ಧಾರ ‘ಅವರ ನಿವೃತ್ತಿ ಬದುಕಿನ ಮೇಲಿನ ಕೊಡಲಿ ಏಟು’ ಎಂದು ಹೇಳಿದ್ದಾರೆ.
‘ಅಧಿಕಾರಕ್ಕೆ ಬಂದ 100 ದಿನ ಆಗುವುದಕ್ಕೂ ಮುಂಚೆಯೇ ಡೊನಾಲ್ಡ್ ಟ್ರಂಪ್ ಆಡಳಿತ ಭಾರಿ ಹಾನಿ ಹಾಗೂ ವಿನಾಶ ಮಾಡಿದೆ. ಇದು ಉಸಿರುಕಟ್ಟುವಂತಿದೆ’ ಎಂದು ಅವರು ಷಿಕಾಗೊದಲ್ಲಿ ನಡೆದ ಅಂಗವಿಕಲ ವಕೀಲರ ಸಮ್ಮೇಳನದಲ್ಲಿ ಹೇಳಿದ್ದಾರೆ.
ಸುಮಾರು 7 ಸಾವಿರ ಉದ್ಯೋಗಿಗಳ ನಿವೃತ್ತಿ ಪ್ರಯೋಜನಗಳನ್ನು ತೆಗೆದು ಹಾಕುವ ಮೂಲಕ ಅವರ ಸಾಮಾಜಿಕ ಭದ್ರತೆಗೆ ಕೊಡಲಿ ಏಟು ನೀಡಿದೆ ಎಂದು ಹೇಳಿದ್ದಾರೆ.
ಟ್ರಂಪ್ ಮತ್ತು ಅವರ ಬಿಲಿಯನೇರ್ ಸಹಾಯಕ ಎಲಾನ್ ಮಸ್ಕ್ ‘ಸರ್ಕಾರಿ ದಕ್ಷತೆ ಇಲಾಖೆ’ಯು ಸಿಬ್ಬಂದಿ ಕಡಿತವನ್ನು ಅವರು ಪ್ರಸ್ತಾಪಿಸಿದರು. ಸಾಮಾಜಿಕ ಭದ್ರತಾ ವೆಬ್‌ಸೈಟ್ ಕ್ರ್ಯಾಶ್ ಆಗುತ್ತಿದೆ. ಇದರಿಂದ ನಿವೃತ್ತರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಬೈಡೆನ್ ಹೇಳಿದ್ದಾರೆ.
ಅನೇಕ ಅಮೇರಿಕನ್ನರು ಆಹಾರ ಖರೀದಿಗೆ, ಜೀವನ ನಿರ್ವಹಣೆಗೆ ಸಾಮಾಜಿಕ ಭದ್ರತೆಯನ್ನು ಅವಲಂಬಿಸಿದ್ದಾರೆ. ಹಲವರಿಗೆ ಅದೇ ಆದಾಯದ ಏಕೈಕ ಮೂಲವಾಗಿದೆ. ಅದನ್ನು ತೆಗೆದುಹಾಕಿದರೆ ಅಥವಾ ಕಡಿತಗೊಳಿಸಿದರೆ ಲಕ್ಷಾಂತರ ಜನರಿಗೆ ವಿನಾಶಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ನೀಲಿ ಬಣ್ಣದ ಸೂಟ್ ಧರಿಸಿದ್ದ 82 ವರ್ಷದ ಬೈಡನ್ ಸುಮಾರು 30 ನಿಮಿಷ ಮಾತನಾಡಿದರು. ಭಾಷಣದ ವೇಳೆ ಅವರು ಬಳಲಿದಂತೆ ಕಾಣುತ್ತಿದ್ದರು. ಟೆಲಿಪ್ರಾಂಪ್ಟರ್ ಇದ್ದರೂ ಅವರು ಹಲವು ವಾಕ್ಯಗಳನ್ನು ಓದಲು ತಿಣುಕಾಡಿದರು. ಹಲವು ವಾಕ್ಯಗಳನ್ನು ಪೂರ್ತಿಯಾಗಿ ಓದಿ ಮುಗಿಸಲು ಅವರಿಂದ ಸಾಧ್ಯವಾಗಲಿಲ್ಲ. ವಯಸ್ಸಿನ ಕಾರಣಕ್ಕಾಗಿಯೇ ಅವರು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.