ADVERTISEMENT

ವೈಟ್‌ಹೌಸ್‌ನಲ್ಲಿ ಮೊಮ್ಮಗಳ ಮದುವೆ ಮಾಡಲು ಜೊ ಬೈಡನ್ ದಂಪತಿ ಭರ್ಜರಿ ಸಿದ್ದತೆ

ಕೃಪೆ: ದಿ ನ್ಯೂಯಾರ್ಕ್‌ ಟೈಮ್ಸ್‌
Published 5 ಏಪ್ರಿಲ್ 2022, 3:14 IST
Last Updated 5 ಏಪ್ರಿಲ್ 2022, 3:14 IST
ನಯೋಮಿ ಬೈಡನ್
ನಯೋಮಿ ಬೈಡನ್   

ವಾಷಿಂಗ್ಟನ್: ತಮ್ಮ ಮೊಮ್ಮಗಳ ಮದುವೆ ತಯಾರಿಯನ್ನು ವೈಟ್‌ಹೌಸ್‌ನಲ್ಲಿ (ಶ್ವೇತಭವನ) ನಡೆಸಲುಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ಭರ್ಜರಿ ತಯಾರಿ ನಡೆಸಿದ್ದಾರೆ.

ಜೊ ಬೈಡನ್ ಹಾಗೂ ಜಿಲ್ ಬೈಡನ್ ದಂಪತಿಯ ಹಿರಿಯ ಮೊಮ್ಮಗಳಾದ ನಯೋಮಿ ಬೈಡನ್ ಅವರು ತಮ್ಮ ದೀರ್ಘಕಾಲದ ಗೆಳೆಯನನ್ನು ವರಿಸುತ್ತಿದ್ದಾರೆ.

ಬರುವ ನವೆಂಬರ್ 19 ರಂದು ವೈಟ್‌ಹೌಸ್‌ನಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿಗಳು ತಿಳಿದು ಬಂದಿಲ್ಲ. ನಯೋಮಿ ಜೋಡಿ ಕೂಡ ಮದುವೆ ದಿನದ ಬಗ್ಗೆ ತಿಳಿಸಿಲ್ಲ.

ADVERTISEMENT

28 ರ ನಯೋಮಿ ಬೈಡನ್ ಅವರು ನ್ಯೂಯಾರ್ಕ್‌ನ 24 ರ ಪೀಟರ್ ನೀಲ್ ಅವರನ್ನು ವರಿಸುತ್ತಿದ್ದಾರೆ. ಇಬ್ಬರದೂ 10ಕ್ಕೂ ಹೆಚ್ಚು ವರ್ಷಗಳಿಂದ ಇರುವ ಗಾಢ ಸ್ನೇಹ ಎನ್ನಲಾಗಿದೆ.ಪೀಟರ್ ಕಾನೂನು ಪದವಿ ವ್ಯಾಸಂಗದಲ್ಲಿ ನಿರತರಾಗಿದ್ದರೆ, ನಯೋಮಿ ಅವರು ವಕೀಲೆಯಾಗಿದ್ದಾರೆ.

‘ಬೈಡನ್ ದಂಪತಿ ತಮ್ಮ ಮೊಮ್ಮಗಳ ಮದುವೆಯನ್ನು ವೈಟ್‌ಹೌಸ್‌ನಲ್ಲಿ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ತಯಾರಿ ಜೋರಾಗಿ ನಡೆಯುತ್ತಿದೆ. ಇನ್ನಷ್ಟು ವಿಷಯಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳಲಾಗುವುದು’ ಎಂದು ಜಿಲ್ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಎಲಿಜೇಬತ್ ಅಲೆಕ್ಸಾಂಡರ್ ಹೇಳಿದ್ದಾರೆ.

ಅಧ್ಯಕ್ಷರು ಹಾಗೂ ಅವರ ಸಂಬಂಧಿ ವೈಟ್‌ಹೌಸ್‌ನಲ್ಲಿ ಮದುವೆಯಂತಹ ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದು ವಿರಳ ಎನ್ನಬಹುದು. ಇದುವರೆಗೆ ವೈಟ್‌ಹೌಸ್ ಇತಿಹಾಸದಲ್ಲಿ ಅಮೆರಿಕ ಅಧ್ಯಕ್ಷರ 9 ಮಕ್ಕಳ ಮದುವೆಗಳು ನಡೆದಿವೆ. ಅಧ್ಯಕ್ಷರಾಗಿದ್ದ ಗ್ರೋವರ್ ಕ್ಲೇವ್‌ಲ್ಯಾಂಡ್ ಅವರು ವೈಟ್‌ಹೌಸ್‌ನಲ್ಲಿಯೇ ಮದುವೆಯಾಗಿದ್ದರು.

2008 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಜಾರ್ಜ್‌ ಬುಶ್ ಅವರು ತಮ್ಮ ಮಗಳು ಜೆನ್ನಾ ಬುಷ್ಅವರ ಮದುವೆಯನ್ನು ವೈಟ್‌ಹೌಸ್‌ನಲ್ಲಿ ಮಾಡಿದ್ದರು. 1812 ರಲ್ಲಿ ವೈಟ್‌ಹೌಸ್‌ನಲ್ಲಿ ಮೊದಲ ಬಾರಿಗೆ ಮದುವೆ ಕಾರ್ಯಕ್ರಮವೊಂದು ನಡೆದಿರುವುದನ್ನು ಇತಿಹಾಸ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.