ADVERTISEMENT

ಮತ್ತೆ ಯುದ್ಧ ಎದುರಾದರೆ ಮೋದಿಗೆ ತಕ್ಕ ಪಾಠ: ಬಿಲಾವಲ್ ಭುಟ್ಟೊ ಜರ್ದಾರಿ ಎಚ್ಚರಿಕೆ

ಪಿಟಿಐ
Published 12 ಆಗಸ್ಟ್ 2025, 13:34 IST
Last Updated 12 ಆಗಸ್ಟ್ 2025, 13:34 IST
ಬಿಲಾವಲ್ ಭುಟ್ಟೊ ಜರ್ದಾರಿ
ಬಿಲಾವಲ್ ಭುಟ್ಟೊ ಜರ್ದಾರಿ   

ಇಸ್ಲಾಮಾಬಾದ್‌: ‘ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿ ಇಡುವ ಭಾರತ ಸರ್ಕಾರದ ನಿರ್ಧಾರವು ಸಿಂಧೂ ನಾಗರಿಕತೆ ಮತ್ತು ಸಂಸ್ಕೃತಿ ಮೇಲಿನ ದಾಳಿಯಾಗಿದೆ’ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಆರೋಪಿಸಿದರು.

ಸಿಂಧಿ ಸಂತ ಶಾ ಅಬ್ದುಲ್‌ ಲತೀಫ್‌ ಭಿತಾಯಿ ಅವರ ಮಂದಿರದಲ್ಲಿ ನಡೆದ ಮೂರು ದಿನಗಳ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಾಕಿಸ್ತಾನ ಯಾವಾಗಲೂ ಶಾಂತಿ ಬಯಸುತ್ತದೆ. ಆದರೆ ಭಾರತ ಯುದ್ಧಕ್ಕೆ ಒತ್ತಾಯಿಸಿದರೆ ಪಾಕ್‌ ಹಿಂದೆ ಸರಿಯುವುದಿಲ್ಲ’ ಎಂದು ಅವರು ಹೇಳಿದರು. 

ADVERTISEMENT

‘ಯುದ್ಧ ಎದುರಾದರೆ ಸಂತ ಶಾ ಅಬ್ದುಲ್‌ ಲತೀಫ್‌ ಭಿತಾಯಿ ನೆಲದ ಜನರು ಮೋದಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ. ನಾವು ತಲೆ ತಗ್ಗಿಸುವುದಿಲ್ಲ. ಒಂದು ವೇಳೆ ನೀವು ಸಿಂಧೂ ನದಿ ಮೇಲೆ ದಾಳಿ ಮಾಡಿದರೆ, ಪಾಕಿಸ್ತಾನದ ಎಲ್ಲ ಪ್ರಾಂತ್ಯಗಳ ಜನರು ನಿಮ್ಮ ವಿರುದ್ಧ ತಿರುಗಿಬೀಳುತ್ತಾರೆ’ ಎಂದು ಅವರು ತಿಳಿಸಿದರು.

ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಅಧ್ಯಕ್ಷರೂ ಅದ ಬಿಲಾವಲ್, ‘ಸಿಂಧೂ ನದಿ ದೇಶದ ಪ್ರಮುಖ ಜಲಮೂಲ. ಅದಕ್ಕಿಂತ ಹೆಚ್ಚಾಗಿ ಅದು ದೇಶದ ಜನರ ಇತಿಹಾಸದ ಜತೆಗೆ ಆಳವಾದ ಸಂಬಂಧ ಹೊಂದಿದೆ’ ಎಂದರು.

‘ಸಿಂಧೂ ನಾಗರಿಕತೆಯು ಈ ನದಿಯ ಜತೆಗೆ ಸಂಪರ್ಕ ಹೊಂದಿದೆ. ಹೀಗಾಗಿ ಈ ಜಲಾನಯನ ಪ್ರದೇಶದ ಜನರ ಮೇಲೆ ನಡೆಯುವ ಯಾವುದೇ ದಾಳಿಯನ್ನು ನಮ್ಮ ನಾಗರಿಕತೆ, ಇತಿಹಾಸ ಮತ್ತು ಸಂಸ್ಕೃತಿಯ ಮೇಲಿನ ದಾಳಿ ಎಂದೇ ಪರಿಗಣಿಸಬೇಕಾಗುತ್ತದೆ’ ಎಂದು ಅವರು ಹೇಳಿದರು. 

‘ದೇಶದ 20 ಕೋಟಿ ಜನರ ನೀರು ಪೂರೈಕೆಗೆ ಎದುರಾಗಿರುವ ಬೆದರಿಕೆ ಕುರಿತು ಜಗತ್ತಿನ ಗಮನ ಸೆಳೆಯಲಾಗಿದೆ’ ಎಂದು ಅವರು ತಿಳಿಸಿದರು.

‘ಭಾರತದ ವಿರುದ್ಧ ಹೋರಾಡಲು ಮತ್ತು ಆರು ನದಿ ನೀರನ್ನು ತರಲು ನಾವು ಶಕ್ತರಾಗಿದ್ದೇವೆ’ ಎಂದೂ ಅವರು ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.