ADVERTISEMENT

ಬೇಜವಾಬ್ದಾರಿ ಕೆಲಸ ಮುಂದುವರಿಸಬೇಡಿ: ಚೀನಾಕ್ಕೆ ಅಮೆರಿಕ ಎಚ್ಚರಿಸಿದ್ದೇಕೆ?

ಏಜೆನ್ಸೀಸ್
Published 19 ಫೆಬ್ರುವರಿ 2023, 7:26 IST
Last Updated 19 ಫೆಬ್ರುವರಿ 2023, 7:26 IST
ವಾಂಗ್‌ಯಿ ಮತ್ತು ಬ್ಲಿಂಕನ್ ನಡುವಿನ ಸಾಂದರ್ಭಿಕ ಚಿತ್ರ
ವಾಂಗ್‌ಯಿ ಮತ್ತು ಬ್ಲಿಂಕನ್ ನಡುವಿನ ಸಾಂದರ್ಭಿಕ ಚಿತ್ರ    

ಮ್ಯೂನಿಕ್‌ (ಜರ್ಮನಿ): ಅಮೆರಿಕದ ವಾಯುಪ್ರದೇಶಕ್ಕೆ ಬೇಹುಗಾರಿಕಾ ಬಲೂನ್‌ಗಳನ್ನು ಕಳುಹಿಸುವ 'ಬೇಜವಾಬ್ದಾರಿ ಕೆಲಸ'ವನ್ನು ಮುಂದುವರಿಸದಂತೆ ಚೀನಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.

‘ಮ್ಯೂನಿಕ್‌ ಭದ್ರತಾ ಸಮ್ಮೇಳ’ನದ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಶನಿವಾರ ತಡರಾತ್ರಿ ಸಭೆ ನಡೆಯಿತು. ಈ ವೇಳೆ ಬೇಹುಗಾರಿಕಾ ಬಲೂನ್ ವಿಷಯ ಪ್ರಸ್ತಾಪವಾಯಿತು.

ತನ್ನ ರಹಸ್ಯ ಪರಮಾಣು ಶಸ್ತ್ರಾಸ್ತ್ರಗಳ ತಾಣಗಳ ಬಳಿ ಚೀನಾದ ಬೇಹುಗಾರಿಕಾ ಬಲೂನ್‌ ಕಾಣಿಸಿಕೊಂಡಾಗಿನಿಂದ ಅಮೆರಿಕ ಎಚ್ಚರಿಕೆಯ ಸ್ಥಿತಿಯಲ್ಲಿದೆ. ಫೆಬ್ರುವರಿ 4 ರಂದು ಪೂರ್ವ ಕರಾವಳಿಯಲ್ಲಿ ಚೀನಾದ ಬಲೂನ್‌ ಅನ್ನು ನಾಶಪಡಿಸಲಾಗಿತ್ತು.

ADVERTISEMENT

ಈ ಘಟನೆಯ ಹಿನ್ನೆಲೆಯಲ್ಲಿ, ಬ್ಲಿಂಕನ್ ಅವರ ಚೀನಾ ಪ್ರವಾಸ ದಿಢೀರ್‌ ರದ್ದಾಗಿತ್ತು.

ಅಮೆರಿಕ ನಾಶಪಡಿಸಿದ ಬಲೂನ್‌ ಪತ್ತೆದಾರಿ ಉದ್ದೇಶದ್ದಲ್ಲ, ಹವಾಮಾನ ಸಂಶೋಧನೆಯ ಉದ್ದೇಶದ್ದು ಎಂದು ಚೀನಾ ಹೇಳುತ್ತಲೇ ಬಂದಿದೆ. ಜತೆಗೆ, ತನ್ನ ಭೂಪ್ರದೇಶದ ಮೇಲೆ ಬೇಹುಗಾರಿಕೆ ಬಲೂನ್‌ಗಳನ್ನು ಅಮೆರಿಕ ಕಳುಹಿಸುತ್ತಿದೆ ಎಂದು ಆರೋಪಿಸಿದೆ. ಆದರೆ, ಇದನ್ನು ಅಮೆರಿಕ ನಿರಾಕರಿಸಿದೆ.

ಭಾರತ, ಜಪಾನ್‌ ಮೇಲೂ ಬಲೂನ್‌

ಭಾರತ ಹಾಗೂ ಜಪಾನ್‌ ಸೇರಿದಂತೆ ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ಚೀನಾ ತನ್ನ ಗೂಢಚಾರಿಕೆ ಬಲೂನ್‌ಗಳ ಹಾರಾಟ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

ರಕ್ಷಣಾ ಹಾಗೂ ಗುಪ್ತಚರ ಇಲಾಖೆಗಳ ಕೆಲ ಅಧಿಕಾರಿಗಳು ಸಂದರ್ಶನ ವೇಳೆ ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.