ADVERTISEMENT

ಬಾಂಗ್ಲಾ ಚುನಾವಣೆ:ಢಾಕಾದಲ್ಲಿ ಗೆದ್ದ ಬಿಎನ್‌ಪಿ ಹಿಂದೂ ಅಭ್ಯರ್ಥಿ ಗಯೇಶ್ವರ್ ಚಂದ್ರ

ಪಿಟಿಐ
Published 13 ಫೆಬ್ರುವರಿ 2026, 10:53 IST
Last Updated 13 ಫೆಬ್ರುವರಿ 2026, 10:53 IST
   

ಢಾಕಾ: ಬಿಎನ್‌ಪಿ ಹಿರಿಯ ನಾಯಕ ಹಾಗೂ ಅಲ್ಪಸಂಖ್ಯಾತ ಹಿಂದೂ ಸಮಾಜದ ಮುಖಂಡರಾಗಿ ಗುರುತಿಸಿಕೊಂಡಿರುವ ಗಯೇಶ್ವರ್ ಚಂದ್ರ ರಾಯ್ ಅವರು ಬಾಂಗ್ಲಾದೇಶದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಢಾಕಾ–3 ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದಾರೆ ಎಂದು ಶುಕ್ರವಾರ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಢಾಕಾ–3 ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಯ್ ತಮ್ಮ ಎದುರಾಳಿ ಜಮಾತ್‌–ಎ–ಇಸ್ಲಾಮಿ ಅಭ್ಯರ್ಥಿಯಾದ ಶಾಹಿನೂರ್ ಇಸ್ಲಾಂ ವಿರುದ್ಧ 99,163 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮಾಜಿ ಸಚಿವರೂ ಆಗಿರುವ ಗಯೇಶ್ವರ್ ಚಂದ್ರ ರಾಯ್ , ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರದ ಘಟನೆಗಳ ನಡುವೆಯೂ ಗೆಲುವಿನ ನಗೆ ಬೀರಿದ್ದಾರೆ.

ADVERTISEMENT

ಕಳೆದ ಡಿಸೆಂಬರ್‌ನಲ್ಲಿ ಉಸ್ಮಾನ್ ಹಾದಿ ಹತ್ಯೆಯ ನಂತರ, ಬಾಂಗ್ಲಾದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿತ್ತು. ಅದರ ನಂತರ ಹಲವು ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಖುಲ್ನಾ–1 ಕ್ಷೇತ್ರದಿಂದ ಸ್ಪರ್ಧಿಸಿದ್ದ ಮತ್ತೊಬ್ಬ ಹಿಂದೂ ಅಭ್ಯರ್ಥಿ ಕೃಷ್ಣ ನಂದಿ ಅವರು 70,346 ಮತಗಳನ್ನು ಪಡೆದಿದ್ದಾರೆ. ಆದರೆ, ಬಿಎನ್‌ಪಿ ಅಭ್ಯರ್ಥಿ ವಿರುದ್ಧ 51,006 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ.

2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿ ಶೇಖ್ ಹಸೀನಾ ನೇತೃತ್ವದ ಸರ್ಕಾರವನ್ನು ಕಿತ್ತುಹಾಕಿದ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದೆ. ಮೂಲಗಳ ಪ್ರಕಾರ ಬಿಎನ್‌ಪಿ ಮುನ್ನಡೆ ಸಾಧಿಸಿದ್ದು, ಬಿಎನ್‌ಪಿಯ ತಾರಿಕ್ ರೆಹಮಾನ್ ಅವರು ಬಾಂಗ್ಲಾದ ಹೊಸ ಪ್ರಧಾನಿಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.