ADVERTISEMENT

ಬಂಡೆಗೆ ಡಿಕ್ಕಿ ಹೊಡೆದು ತಾರಾ ಏರ್‌ ವಿಮಾನ ಪತನ: 21 ಶವ ಪತ್ತೆ

ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಭಾರತೀಯರು ಶವವಾಗಿ ಪತ್ತೆ

ಏಜೆನ್ಸೀಸ್
Published 30 ಮೇ 2022, 14:05 IST
Last Updated 30 ಮೇ 2022, 14:05 IST
ನೇಪಾಳದ ಥಾಸಾಂಗ್ ಪುರಸಭೆಯ ಸನೋಸ್‌ವೇರ್ ಪ್ರದೇಶದ 14,500 ಅಡಿ ಎತ್ತರದಲ್ಲಿ ತಾರಾ ಏರ್‌ ವಿಮಾನ ಅಪಘಾತಕ್ಕೀಡಾಗಿ, ಅವಶೇಷಗಳು ಪರ್ವತದ ಮೇಲೆ ಛಿದ್ರವಾಗಿ ಬಿದ್ದಿರುವುದನ್ನು ಸೋಮವಾರ ಸೇನಾ ಸಿಬ್ಬಂದಿ ಪತ್ತೆ ಹಚ್ಚಿದರು  – ಎಪಿ/ಪಿಟಿಐ ಚಿತ್ರ
ನೇಪಾಳದ ಥಾಸಾಂಗ್ ಪುರಸಭೆಯ ಸನೋಸ್‌ವೇರ್ ಪ್ರದೇಶದ 14,500 ಅಡಿ ಎತ್ತರದಲ್ಲಿ ತಾರಾ ಏರ್‌ ವಿಮಾನ ಅಪಘಾತಕ್ಕೀಡಾಗಿ, ಅವಶೇಷಗಳು ಪರ್ವತದ ಮೇಲೆ ಛಿದ್ರವಾಗಿ ಬಿದ್ದಿರುವುದನ್ನು ಸೋಮವಾರ ಸೇನಾ ಸಿಬ್ಬಂದಿ ಪತ್ತೆ ಹಚ್ಚಿದರು  – ಎಪಿ/ಪಿಟಿಐ ಚಿತ್ರ   

ಕಠ್ಮಂಡು, ಪೋಖರಾ: ನೇಪಾಳದ ಮಸ್ಟ್ಯಾಂಗ್‌ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಪತನಗೊಂಡ ವಿಮಾನದ ಅವಶೇಷಗಳ ಬಳಿ 21 ಶವಗಳನ್ನು ರಕ್ಷಣಾ ಸಿಬ್ಬಂದಿ ಸೋಮವಾರ ಹೊರತೆಗೆದಿದ್ದಾರೆ. ಘಟನಾ ಸ್ಥಳ ದುರ್ಗಮ ಪ್ರದೇಶದಿಂದ ಕೂಡಿದ್ದು, ಇನ್ನೊಬ್ಬ ಪ್ರಯಾಣಿಕರ ಪತ್ತೆಗೆ ಶೋಧ ನಡೆಯುತ್ತಿದೆ.

ನಾಲ್ವರು ಭಾರತೀಯರು, ಜರ್ಮನಿಯ ಇಬ್ಬರು ನಾಗರಿಕರು ಮತ್ತು 13 ಮಂದಿ ನೇಪಾಳಿಗರು ಹಾಗೂ ಮೂವರು ವಿಮಾನ ಸಿಬ್ಬಂದಿ ಸೇರಿ 22 ಜನರು ಈ ವಿಮಾನದಲ್ಲಿದ್ದರು. ಕೆನಡಾದಡಿ ಹ್ಯಾವಿಲ್ಯಾಂಡ್ ನಿರ್ಮಿತಈ ವಿಮಾನವು ಪೋಖರಾ ನಗರದಿಂದ ಮಧ್ಯ ನೇಪಾಳದ ಪ್ರಸಿದ್ಧ ಚಾರಣ ತಾಣ ಜೋಮ್ಸಮ್‌ಗೆ ಹಾರುತ್ತಿತ್ತು.

ಭಾರತೀಯ ವಿಚ್ಛೇದಿತ ದಂಪತಿ ತಮ್ಮ 15 ವರ್ಷದ ಪುತ್ರಿ ಮತ್ತು 22 ವರ್ಷದ ಪುತ್ರನ ಜತೆ ರಜೆ ಕಳೆಯಲು ಪ್ರವಾಸಿ ತಾಣಕ್ಕೆ ಈ ವಿಮಾನದಲ್ಲಿ ಹೋಗುತ್ತಿದ್ದರು ಎಂದು ಭಾರತೀಯ ಪೊಲೀಸ್ ಅಧಿಕಾರಿ ಉತ್ತಮ್ ಸೋನಾವಾನೆ ತಿಳಿಸಿದ್ದಾರೆ.

ADVERTISEMENT

‘ವಿಚ್ಛೇದಿತ ವ್ಯಕ್ತಿಗೆ ಪ್ರತಿ ವರ್ಷ 10 ದಿನ ಕುಟುಂಬದೊಂದಿಗೆ ಸಮಯ ಕಳೆಯಲು ನ್ಯಾಯಾಲಯ ಅನುಮತಿ ನೀಡಿದ್ದು, ಅದರಿಂದಾಗಿ ಅವರು ಪ್ರವಾಸ ಕೈಗೊಂಡಿದ್ದರು’ ಎಂದು ಸೋನಾವಾನೆ ಹೇಳಿದರು.

ಮೃತರಲ್ಲಿ ನೇಪಾಳ ಮೂಲದ ಕಂಪ್ಯೂಟರ್‌ ಎಂಜಿನಿಯರ್‌ ತಮ್ಮ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಆ ದಿನವಷ್ಟೇ ಅಮೆರಿಕದಿಂದ ವಾಪಸಾಗಿದ್ದರು.

ನೇಪಾಳ ಸೇನಾ ಸಿಬ್ಬಂದಿಗೆ ಪ್ರತಿಕೂಲ ಹವಾಮಾನದಿಂದಾಗಿ ಘಟನಾ ಸ್ಥಳ ಪತ್ತೆಹಚ್ಚಲುಭಾನುವಾರ ಸಾಧ್ಯವಾಗಿರಲಿಲ್ಲ. ಸೋಮವಾರ ಮತ್ತೆ ಶೋಧ ಆರಂಭಿಸಿದ ರಕ್ಷಣಾ ತಂಡ, ಘಟನಾ ಸ್ಥಳ ತಲುಪಿ, ಶವಗಳನ್ನು ಹೊರತೆಗೆದಿದೆ’ ಎಂದುನೇಪಾಳ ಸೇನಾ ವಕ್ತಾರ ನಾರಾಯಣ್ ಸಿಲ್ವಾಲ್ ತಿಳಿಸಿದ್ದಾರೆ.

‘ಕಾರ್ಯಾಚರಣೆಗೆ ಕಷ್ಟಕರ ಪ್ರದೇಶವಿದು. ವಿಮಾನದ ಅವಶೇಷಗಳು ಪರ್ವತದ ಇಳಿಜಾರಿನಾದ್ಯಂತ ಚದುರಿಬಿದ್ದಿವೆ’ ಎಂದು ಅಪಘಾತದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾರಾ ಏರ್‌ಗೆ ಸೇರಿದ ಟರ್ಬೊಪ್ರಾಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನ ಟೇಕಾಫ್‌ ಆದ ಸ್ವಲ್ಪ ಸಮಯದಲ್ಲೇ ನೇಪಾಳದ ಪರ್ವತ ಪ್ರದೇಶದಲ್ಲಿನ ಥಾಸಾಂಗ್‌ ಪಟ್ಟಣ ಬಳಿಯ ಲಲಿಂಗ್ಚಾಗೋಲಾ ಎಂಬಲ್ಲಿ ವಾಯು ಸಂಚಾರ ನಿಯಂತ್ರಕದ (ಎಟಿಆರ್‌)ಸಂಪರ್ಕ ಕಳೆದುಕೊಂಡಿತ್ತು.

ವಿಮಾನ ಬಂಡೆಗೆ ಡಿಕ್ಕಿ:‘ಅಪಘಾತದ ಚಿತ್ರಗಳನ್ನು ವಿಶ್ಲೇಷಿಸಿದಾಗ, ವಿಮಾನಕ್ಕೆ ಬೆಂಕಿ ಬಿದ್ದಿಲ್ಲ. ವಿಮಾನವು ಬೆಟ್ಟದ ಮೇಲಿನ ದೊಡ್ಡ ಬಂಡೆಗೆ ಡಿಕ್ಕಿ ಹೊಡೆದಿದೆ’ ಎಂದುಪೋಖರಾ ವಿಮಾನ ನಿಲ್ದಾಣದ ವಕ್ತಾರ ದೇವ್ ರಾಜ್ ಸುಬೇದಿ ಹೇಳಿದ್ದಾರೆ.

ಸೇನೆ, ಪೊಲೀಸರು, ಪರ್ವತ ಮಾರ್ಗದರ್ಶಕರು ಮತ್ತು ಸ್ಥಳೀಯರು ಸೇರಿ ಸುಮಾರು 60 ಜನರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಹುತೇಕ ಎಲ್ಲರೂ ಮೈಲುಗಳಷ್ಟು ದೂರ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿ,ಘಟನಾ ಸ್ಥಳ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.