ADVERTISEMENT

ಇಂಡೊನೇಷ್ಯಾ ವಿಮಾನ ಪತನ: ಜಾವಾ ಸಮುದ್ರದಲ್ಲಿ ಮೃತದೇಹ, ಬಟ್ಟೆ ಪತ್ತೆ

ಏಜೆನ್ಸೀಸ್
Published 10 ಜನವರಿ 2021, 3:02 IST
Last Updated 10 ಜನವರಿ 2021, 3:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜಕಾರ್ತ: ಇಂಡೊನೇಷ್ಯಾ ರಾಜಧಾನಿ ಜಕಾರ್ತದ ಬಳಿಯ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ವಿಮಾನದ ಅವಶೇಷಗಳನ್ನು ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿಗೆ ಮನುಷ್ಯರ ದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಹದ ತುಣುಕುಗಳು ಭಾನುವಾರ ಬೆಳಗ್ಗೆ ದೊರೆತಿವೆ.

ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಇಂಡೊನೇಷ್ಯಾ ರಾಷ್ಟ್ರೀಯ ರಕ್ಷಣಾ ಸಂಸ್ಥೆಯು, 'ಜಾವಾ ಸಮುದ್ರದಲ್ಲಿ ದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಹದ ತುಣುಕುಗಳು ದೊರೆತಿವೆ. ಈ ತುಣುಕುಗಳು ಲಂಕಾಂಗ್ ದ್ವೀಪ ಮತ್ತು ಲಕಿ ದ್ವೀಪದ ನಡುವೆ ಪತ್ತೆಯಾಗಿವೆ' ಎಂದು ಮಾಹಿತಿ ನೀಡಿದೆ.

ಇಂಡೊನೇಷ್ಯಾ ರಾಜಧಾನಿ ಜಕಾರ್ತದಿಂದ ಹೊರಟಿದ್ದ ಶ್ರೀವಿಜಯ ಏರ್‌ ಏರ್‌ಲೈನ್‌ ಕಂಪನಿಯ ವಿಮಾನವೊಂದು ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ 50 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಇದ್ದರು.

ADVERTISEMENT

ಭಾರಿ ಮಳೆಯ ಕಾರಣ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ಬೋಯಿಂಗ್‌ 737–500 ವಿಮಾನವು ಟೇಕ್‌ ಆಫ್‌ ಆಗಿತ್ತು. ಪಶ್ಚಿಮ ಕಾಲಿಮಂತನ್‌ ಪ್ರಾಂತ್ಯದ ಪಾಂಟಿಯಾನಾಕ್‌ಗೆ ತೆರಳುತ್ತಿದ್ದ ಈ ವಿಮಾನವು ಕೆಲವೇ ನಿಮಿಷದಲ್ಲಿ ರೇಡಾರ್‌ನಿಂದ ನಾಪತ್ತೆಯಾಗಿತ್ತು.

‘ಫ್ಲೈಟ್‌ ಎಸ್‌ಜೆ- 182ನಲ್ಲಿ 62 ಜನರಿದ್ದರು. ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿರುವ ಲಾಕಿ ದ್ವೀಪದ ಸಮೀಪ ವಿಮಾನ ಪತನವಾಗಿದೆ’ ಎಂದು ಇಂಡೊನೇಷ್ಯಾ ಸಾರಿಗೆ ಸಚಿವ ಬುದಿ ಕರ್ಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.