ADVERTISEMENT

ಬೊಲ್ಸೊನಾರೊಗೆ ಆಶ್ರಯ ನೀಡದಂತೆ ಬೈಡನ್‌ಗೆ ಒತ್ತಡ

ಏಜೆನ್ಸೀಸ್
Published 11 ಜನವರಿ 2023, 13:33 IST
Last Updated 11 ಜನವರಿ 2023, 13:33 IST
ಜೈರ್‌ ಬೊಲ್ಸೊನಾರೊ
ಜೈರ್‌ ಬೊಲ್ಸೊನಾರೊ   

ಮಿಯಾಮಿ: ಫ್ಲಾರಿಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಬೊಲ್ಸೊನಾರೊ ಅವರನ್ನು ದೇಶದಿಂದ ಹೊರಗಟ್ಟುವಂತೆ ಅಮೆರಿಕದ ಎಡಪಂಥೀಯರು ಮತ್ತು ಕೆಲ ಜನಪ್ರತಿನಿಧಿಗಳು ಅಧ್ಯಕ್ಷ ಜೋ ಬೈಡನ್‌ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಕಳೆದ ವರ್ಷ ಬ್ರೆಜಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಲಪಂಥೀಯ ಪ್ರತಿಪಾದಕ ಬೊಲ್ಸೊನಾರೊ ಸೋತಿದ್ದರು. ಎಡಪಂಥೀಯ ಒಲವಿನ ಲುಯಿಸ್‌ ಇನಾಸಿಯೊ ಲುಲ ಡ ಸಿಲ್ವ ಗೆಲುವು ಸಾಧಿಸಿದ್ದರು. ಆದರೆ ಸೋಲನ್ನು ಒಪ್ಪಿಕೊಳ್ಳದ ಬೊಲ್ಸೊನಾರೊ ಬೆಂಬಲಿಗರು ಬ್ರೆಜಿಲ್‌ನ ಸಂಸತ್ತು, ಸುಪ್ರೀಂ ಕೋರ್ಟ್‌ ಮತ್ತು ಅಧ್ಯಕ್ಷರ ಅರಮನೆಗೆ ಭಾನುವಾರ ನುಗ್ಗಿ ದಾಂದಲೆ ನಡೆಸಿದ್ದರು.

‘2018ರಲ್ಲಿ ದುಷ್ಕರ್ಮಿಗಳಿಂದ ನನಗೆ ಇರಿತವಾಗಿತ್ತು. ಇದರಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವ ನಾನು ಚಿಕಿತ್ಸೆ ಸಲುವಾಗಿ ಇಲ್ಲಿ ದಾಖಲಾಗಿದ್ದೇನೆ. ಜನವರಿ ಅಂತ್ಯದ ವೇಳೆಗೆ ಬ್ರೆಜಿಲ್‌ಗೆ ತೆರಳಲಿದ್ದೇನೆ’ ಎಂದು ಬೊಲ್ಸೊನಾರೊ ಸಿಎನ್‌ಎನ್‌ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ನಾನು ನನ್ನ ಕುಟುಂಬದೊಂದಿಗೆ ಕೆಲ ಕಾಲ ಕಳೆಯಲು ದೂರ ಬಂದಿದ್ದೆ. ಆದರೆ ಈ ದಿನಗಳು ಶಾಂತ ದಿನಗಳಾಗಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್‌ ಅಂತ್ಯದಲ್ಲಿ ಫ್ಲಾರಿಡಾಗೆ ಬಂದಿದ್ದ ಬೊಲ್ಸೊನಾರೊ, ಜನವರಿ 1ರಂದು ನೂತನ ಅಧ್ಯಕ್ಷ ಲುಯಿಸ್‌ ಇನಾಸಿಯೊ ಲುಲ ಡ ಸಿಲ್ವ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು.

‘ಎರಡು ವರ್ಷಗಳ ಹಿಂದೆ ಅಮೆರಿಕದ ಕ್ಯಾಪಿಟಲ್‌ ಮೇಲೆ ಫ್ಯಾಸಿಸ್ಟ್‌ಗಳ ದಾಳಿ ನಡೆದಿತ್ತು. ಇದೇ ರೀತಿಯ ದಾಳಿಯನ್ನು ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನೋಡಿದ್ದೇವೆ’ ಎಂದಿರುವ ಅಮೆರಿಕದ ಕೆಲ ಜನಪ್ರತಿನಿಧಿಗಳು, ‘ಬೊಲ್ಸೊನಾರೊಗೆ ಫ್ಲಾರಿಡಾದಲ್ಲಿ ಆಶ್ರಯ ನೀಡುವುದನ್ನು ಅಮೆರಿಕ ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.