ADVERTISEMENT

ಗಡಿ ವಿವಾದ | ‘ಮಾತುಕತೆಗೆ ಚೀನಾ ಸಿದ್ಧ’

ಪಿಟಿಐ
Published 17 ಆಗಸ್ಟ್ 2020, 21:30 IST
Last Updated 17 ಆಗಸ್ಟ್ 2020, 21:30 IST
   

ಬೀಜಿಂಗ್‌: ಪರಸ್ಪರ ನಂಬಿಕೆ ವೃದ್ಧಿ, ಭಿನ್ನಾಭಿಪ್ರಾಯಗಳ ಸಮರ್ಪಕ ನಿರ್ವಹಣೆ ಮತ್ತು ದೀರ್ಘಾವಧಿಯ ದ್ವಿಪಕ್ಷೀಯ ಸಂಬಂಧದ ಸಂರಕ್ಷಣೆಯಂತಹ ವಿಚಾರಗಳಲ್ಲಿ ಭಾರತದ ಜತೆ ಕೆಲಸ ಮಾಡಲು ಸಿದ್ಧ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್‌ ಸೋಮವಾರ ಹೇಳಿದ್ದಾರೆ.

ದೇಶದ ಸಾರ್ವಭೌಮತೆಗೆ ಸವಾಲೊಡ್ಡಿದವರಿಗೆ ಭಾರತದ ಸಶಸ್ತ್ರ ಪಡೆಗಳು ತಕ್ಕ ಉತ್ತರ ನೀಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ಚೀನಾದ ಪ್ರತಿಕ್ರಿಯೆ ಏನು ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

‘ನಿಯಂತ್ರಣ ರೇಖೆಯಿಂದ (ಎಲ್‌ಒಸಿ–ಪಾಕಿಸ್ತಾನದ ಜತೆಗಿನ ಗಡಿ) ವಾಸ್ತವ ನಿಯಂತ್ರಣ ರೇಖೆಯವರೆಗೆ (ಎಲ್‌ಎಸಿ– ಚೀನಾ ಜತೆಗಿನ ಗಡಿ) ಭಾರತದ ಸಾರ್ವಭೌಮತೆಯ ಮೇಲೆ ಕಣ್ಣು ಹಾಕಿದವರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಸಶಸ್ತ್ರ ಪಡೆಗಳು ಉತ್ತರ ಕೊಟ್ಟಿವೆ’ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಹೇಳಿದ್ದರು.

ADVERTISEMENT

ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಚೀನಾ ಸೃಷ್ಟಿಸಿದ ಗಡಿ ವಿವಾದ ಮತ್ತು ಎಲ್‌ಒಸಿಯಲ್ಲಿ ಪಾಕಿಸ್ತಾನ ಕಡೆಯಿಂದ ಆಗುತ್ತಿರುವ ಕದನ ವಿರಾಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಮೋದಿ ಹೀಗೆ ಹೇಳಿದ್ದರು.

‘ಮೋದಿ ಅವರ ಭಾಷಣ ಗಮನಿಸಿದ್ದೇವೆ’ ಎಂದೂ ಝಾವೊ ಹೇಳಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಚೀನಾದ ಜತೆಗೆ ಜೂನ್‌ 15ರಂದು ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾದ ಕಡೆಯೂ ಸೈನಿಕರು ಮೃತಪಟ್ಟಿದ್ದಾರೆ. ಆದರೆ, ಅದರ ವಿವರಗಳನ್ನು ಆ ದೇಶವು ಬಹಿರಂಗ ಮಾಡಿಲ್ಲ.

***

ಪರಸ್ಪರರಿಗೆ ಗೌರವ ಮತ್ತು ಬೆಂಬಲ ನೀಡುವುದು ಎರಡೂ ದೇಶಗಳು ಅನುಸರಿಸಬೇಕಾದ ಸರಿಯಾದ ಮಾರ್ಗ. ನಮ್ಮ ದೀರ್ಘಾವಧಿ ಹಿತಾಸಕ್ತಿಗೂ ಇದು ಅಗತ್ಯ.
-ಝಾವೊ ಲಿಜಿಯನ್‌, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.