ADVERTISEMENT

ಯುದ್ಧ ಗೆಲ್ಲುವವರೆಗೆ ಉಕ್ರೇನ್‌ಗೆ ಬೆಂಬಲ: ಜಿ–7 ರಾಷ್ಟ್ರಗಳ ಘೋಷಣೆ

ಕೀವ್‌ಗೆ ಇನ್ನಷ್ಟು ಶಸ್ತ್ರಾಸ್ತ್ರ ಪೂರೈಕೆಗೆ ಬ್ರಿಟನ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:49 IST
Last Updated 14 ಮೇ 2022, 2:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಂಗೆಲ್ಸ್‌ (ಜರ್ಮನಿ)/ಕೀವ್‌:ರಷ್ಯಾ ವಿರುದ್ಧ ಗೆಲುವು ಸಾಧಿಸುವವರೆಗೂ ಉಕ್ರೇನ್‌ ಬೆಂಬಲಿಸಲು ಜಿ–7 ರಾಷ್ಟ್ರಗಳು ಪ್ರಬಲವಾಗಿ ಒಗ್ಗೂಡಿವೆ ಎಂದು ಫ್ರಾನ್ಸ್ ಶುಕ್ರವಾರ ಹೇಳಿದೆ.

ಇದೇ ವೇಳೆ ಉಕ್ರೇನ್‌ಗೆ ₹2.40 ಲಕ್ಷ ಕೋಟಿಯ ಸೇನಾ ನೆರವನ್ನು ಜಿ–7 ಘೋಷಿಸಿದೆ.

ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಪೂರೈಕೆಯ ವಿರುದ್ಧ ನ್ಯಾಟೊಗೆ ರಷ್ಯಾ ‘ಅಣ್ವಸ್ತ್ರ ಯುದ್ಧ’ದ ಬೆದರಿಕೆ ಹಾಕಿದ ನಡುವೆಯೂ, ಬ್ರಿಟನ್‌, ರಷ್ಯಾ ಮೇಲೆ ಒತ್ತಡ ಮುಂದುವರಿಸಲು ಕೀವ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಸಲು ಪಶ್ಚಿಮದ ರಾಷ್ಟ್ರಗಳಿಗೆ ಕರೆ ಕೊಟ್ಟಿದೆ.

ADVERTISEMENT

ಇಲ್ಲಿ ನಡೆಯುತ್ತಿರುವ‘ಜಿ–7’ ವಿದೇಶಾಂಗ ಸಚಿವರಮೂರು ದಿನಗಳ ಮಾತುಕತೆಗಾಗಿ ಆಗಮಿಸಿರುವ ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್‌,‘ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರ ಪೂರೈಕೆ ಮತ್ತು ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧ ಹೇರುವ ಮೂಲಕ ಪುಟಿನ್ ಮೇಲೆನಾವು ಒತ್ತಡ ಹೆಚ್ಚಿಸುವುದು ಈಗಿನ ತುರ್ತು ಅಗತ್ಯ. ಈ ಬಿಕ್ಕಟ್ಟಿನಲ್ಲಿ ಜಿ–7 ರಾಷ್ಟ್ರಗಳ ಒಗ್ಗಟ್ಟು ಕೂಡ ಮಹತ್ವದ್ದಾಗಿದೆ’ ಎಂದರು.

ರಷ್ಯಾದ ಆಕ್ರಮಣದ ಭೀತಿಯಿಂದ ಸ್ವೀಡನ್ ಮತ್ತು ಫಿನ್ಲೆಂಡ್‌ ನ್ಯಾಟೊ ಸದಸ್ಯತ್ವ ಪಡೆಯುವ ಪ್ರಕ್ರಿಯೆ ಚುರುಕುಗೊಳಿಸಿವೆ. ಆದರೆ, ನ್ಯಾಟೊ ಸದಸ್ಯ ರಾಷ್ಟ್ರ ಟರ್ಕಿ ಇದಕ್ಕೆ ಅಸಮ್ಮತಿ ಸೂಚಿಸಿದೆ. ಪ್ರತೀಕಾರವಾಗಿಫಿನ್ಲೆಂಡ್‌ಗೆ ಶನಿವಾರದಿಂದಲೇ ವಿದ್ಯುತ್‌ ಸರಬರಾಜು ಕಡಿತಗೊಳಿಸುವುದಾಗಿ ರಷ್ಯಾ ಎಚ್ಚರಿಕೆ ನೀಡಿದೆ.

ಮಾತುಕತೆಗೆ ಸಿದ್ಧ: ‘ರಷ್ಯಾ ಅಧ್ಯಕ್ಷ ಪುಟಿನ್ ಜತೆಗೆ ಮಾತುಕತೆಗೆ ಸಿದ್ಧ. ಯಾವುದೇ ಅಂತಿಮ ಷರತ್ತುಗಳಿಲ್ಲದೇನಾವು ಒಪ್ಪಂದಕ್ಕೆ ಬರಬೇಕು’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.‘ಕ್ರಿಮಿಯಾವನ್ನು ರಷ್ಯಾದ ಭಾಗವೆಂದು ಒಪ್ಪುವುದಿಲ್ಲ. ರಷ್ಯಾ ಪಡೆಗಳು ತಕ್ಷಣ ಉಕ್ರೇನ್‌ ತೊರೆಯಬೇಕು’ ಎಂದಿದ್ದಾರೆ.

60 ಲಕ್ಷ ದಾಟಿದ ನಿರಾಶ್ರಿತರ ಸಂಖ್ಯೆ:ಉಕ್ರೇನ್‌ನಲ್ಲಿ ದಿನದಿನಕ್ಕೂ ರಷ್ಯಾ ಪಡೆಗಳ ಯುದ್ಧಾಪರಾಧಗಳು ಹೆಚ್ಚುತ್ತಿದ್ದು, ಸಾವಿರಾರು ಜನರನ್ನು ಕ್ರೂರ ವಿಚಾರಣೆ ಶಿಬಿರಗಳಿಗೆ ಬಲವಂತವಾಗಿ ಕರೆದೊಯ್ಯಲಾಗಿದೆ ಎನ್ನುವಆರೋಪಗಳು ರಷ್ಯಾ ವಿರುದ್ಧ ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.