ADVERTISEMENT

ಭಾರತದ ಬಜೆಟ್‌: ಅಮೆರಿಕ, ಸಿಂಗಪುರ ಸ್ವಾಗತ

ವಿದೇಶಿ ನೇರ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ

ಪಿಟಿಐ
Published 6 ಜುಲೈ 2019, 19:58 IST
Last Updated 6 ಜುಲೈ 2019, 19:58 IST
   

ವಾಷಿಂಗ್ಟನ್/ಸಿಂಗಪುರ: ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ಬಜೆಟ್‌ ಅನ್ನು ಅಮೆರಿಕ ಮತ್ತು ಸಿಂಗಪುರ ಸ್ವಾಗತಿಸಿವೆ.

’ಭಾರತದ ಬಜೆಟ್ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲಿದೆ. ಕೆಳವರ್ಗದ ಹಿತಾಸಕ್ತಿ ಮತ್ತು ಬೆಳವಣಿಗೆಯನ್ನು ಖಾತ್ರಿ ಪಡಿಸುವಂತಿದೆ’ ಎಂದು ಯುಎಸ್‌–ಇಂಡಿಯಾ ಸ್ಟ್ರ್ಯಾಟಜಿಕ್ ಆ್ಯಂಡ್ ಪಾರ್ಟನರ್‌ಶಿಪ್ ಫೋರಂ (ಯುಎಸ್ಐಎಸ್‌ಪಿಎಫ್‌) ಅಧ್ಯಕ್ಷ ಮುಕೇಖ್ ಅಘಿ ತಿಳಿಸಿದ್ದಾರೆ.

‘ಎಫ್‌ಡಿಐಗೆ ಪ್ರೋತ್ಸಾಹ ನೀಡುವ ಈ ಬಜೆಟ್‌ ಸುಧಾರಣಾ ದೃಷ್ಟಿಕೋನದಿಂದ ಕೂಡಿದೆ’ ಎಂದು ಅಮೆರಿಕ–ಭಾರತ ವಾಣಿಜ್ಯ ಕೌನ್ಸಿಲ್‌ನ ಅಧ್ಯಕ್ಷೆ ನಿಶಾ ದೇಸಾಯಿ ಬಿಸ್ವಾಲ್ ಹೇಳಿದ್ದಾರೆ.

ADVERTISEMENT

‘ಭಾರತದ ಮೊದಲ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್ ಆದ್ಯತೆ ವಲಯಗಳನ್ನು ಪರಿಗಣಿಸಿದೆ. ಇದು 10 ವರ್ಷಗಳ ದೀರ್ಘಾವಧಿ ಆರ್ಥಿಕ ಪ್ರಗತಿಯ ದೂರದೃಷ್ಟಿಯನ್ನು ಹೊಂದಿದೆ’ ಎಂದು ಅಮೆರಿಕ–ಭಾರತ ವಾಣಿಜ್ಯ ಒಕ್ಕೂಟದ ಅಧ್ಯಕ್ಷ ಕರುಣ್ ರಿಷಿ ಪ್ರತಿಕ್ರಿಯಿಸಿದ್ದಾರೆ.

‘ಮೂಲಸೌಕರ್ಯ ಅಭಿವೃದ್ದಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಕಾರ್ಯಕ್ರಮಗಳ ವಿಸ್ತರಣೆ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾದಂಥ ದೊಡ್ಡ ಅಭಿಯಾನಗಳ ಮುಂದುವರಿಕೆಯೂ ಬಜೆಟ್‌ನಲ್ಲಿದೆ’ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ ನ್ಯಾಷನಲ್ ಸ್ಟಡೀಸ್ (ಸಿಎಸ್‌ಎಸ್‌) ಥಿಂಕ್‌ ಟ್ಯಾಂಕ್‌ನ ಚಿಂತಕ ರಿಕ್ ರೊಸ್ಸೊ ಅಭಿಪ್ರಾಯಪಟ್ಟಿದ್ದಾರೆ.

2019–20ರ ಭಾರತದ ಬಜೆಟ್ ವಾಣಿಜ್ಯ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ ಎಂದು ಸಿಂಗಪುರ ಮೂಲದ ಬ್ಯಾಂಕ್‌ ಡಿಬಿಎಸ್‌ ಗ್ರೂಪ್‌ನ ಅರ್ಥಶಾಸ್ತ್ರಜ್ಞೆ ರಾಧಿಕಾ ರಾವ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.