ಡೊನಾಲ್ಡ್ ಟ್ರಂಪ್‌ರ ಯುವಮಿತ್ರ ಚಾರ್ಲಿ ಕಿರ್ಕ್
ನ್ಯೂಯಾರ್ಕ್: ಅಮೆರಿಕದ ಇತ್ತೀಚಿನ ಖ್ಯಾತ ಬಲಪಂಥೀಯ ಯುವ ಚಿಂತಕ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತಮಿತ್ರ ಎಂದೇ ಖ್ಯಾತರಾಗಿದ್ದ ಚಾರ್ಲಿ ಕಿರ್ಕ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಅಮೆರಿಕ ರಾಜ್ಯವಾದ ಉತಾಹ್‌ನ ಒರೆಮ್ ನಗರದ ‘ಉತಾಹ್ ವ್ಯಾಲಿ ವಿಶ್ವವಿದ್ಯಾಲಯ’ದಲ್ಲಿ ಚಾರ್ಲಿ ಕಿರ್ಕ್ ಅವರನ್ನು ದುಷ್ಕರ್ಮಿಗಳು ಸುಮಾರು ನೂರು ಮೀಟರ್ ಅಂತರದಿಂದ ಕತ್ತಿನ ಭಾಗಕ್ಕೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶ್ವವಿದ್ಯಾಲಯದಲ್ಲಿ ಚಾರ್ಲಿ ಕಿರ್ಕ್ ಅವರ ‘ದಿ ಅಮೆರಿಕನ್ ಕಮ್‌ಬ್ಯಾಕ್’ ಎಂಬ ಸಮಾವೇಶವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸುಮಾರು 3 ಸಾವಿರ ಜನ ಸೇರಿದ್ದರು. ಟೆಂಟ್ ರೀತಿಯ ವೇದಿಕೆಯಲ್ಲಿ ಚಾರ್ಲಿ ಕಿರ್ಕ್ ಅವರು ಕೂತಿದ್ದರು.
ಮಧ್ಯಾಹ್ನ 12.20ರ ವೇಳೆ ಅವರು ಅಮೆರಿಕದಲ್ಲಿ ಮಾಸ್ ಶೂಟಿಂಗ್ ಬಗ್ಗೆ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು. ಆಗ ಅವರ ಕುತ್ತಿಗೆ ಭಾಗಕ್ಕೆ ಗುಂಡು ತಗುಲಿದ್ದರಿಂದ ತೀವ್ರ ರಕ್ತ ಸೋರಿಕೆಯಾತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತರಾಗಿದ್ದರು ಎಂದು ಘೋಷಿಸಲಾಗಿದೆ.
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹಂತಕರ ಪತ್ತೆಗೆ ತನಿಖಾ ಏಜನ್ಸಿ ಎಫ್‌ಬಿಐ ತೀವ್ರ ಕಾರ್ಯಾಚರಣೆ ಆರಂಭಿಸಿದೆ. ರೂಫ್‌ಟಾಪ್ ಒಂದರಿಂದ ಸ್ನೈಪರ್‌ಗಳು ಹತ್ಯೆಗೈದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಅವರನ್ನು ಬಂಧಿಸಿಲ್ಲ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರು ತಿಳಿಸಿದ್ದಾರೆ.
ಕಿರ್ಕ್ ಅವರು ‘conservative organization’ ಎಂಬ ಸಂಘಟನೆ ಸ್ಥಾಪಿಸಿ ಬಲಪಂಥೀಯ ವಿಚಾರಗಳನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು. ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ ಯುವ ಅಲೆ ಎದ್ದೇಳಲು 31 ವರ್ಷದ ಕಿರ್ಕ್ ಅವರು ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲದೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕದ ಪ್ರಮುಖ ಯುವ ರಾಜಕೀಯ ಇನ್‌ಫ್ಲುಯೆನ್ಸರ್ ಎಂದು ಗುರುತಿಸಿಕೊಂಡಿದ್ದರು.
ಚಾರ್ಲಿ ಕಿರ್ಕ್ ಅವರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಿರ್ಕ್ ಅವರ ಹತ್ಯೆಗೆ ಡೊನಾಲ್ಡ್ ಟ್ರಂಪ್ ಸೇರಿದಂತೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಇದು ಹೇಡಿತನ ಕೃತ್ಯ. ಇದು ಅಮೆರಿಕಕ್ಕೆ ಕರಾಳ ದಿನ. ಎಡಪಂಥೀಯ ವಿಚಾರಧಾರೆಯ ನೀಚತನದ ಕೃತ್ಯ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.