ಚಾರ್ಲಿ ಕಿರ್ಕ್
–ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ‘ನನ್ನ ಆಪ್ತ ಸ್ನೇಹಿತ ಚಾರ್ಲಿ ಕಿರ್ಕ್‌ನ ಹತ್ಯೆಗೆ ಎಡಪಂಥೀಯರೇ ಕಾರಣ. ಕೃತ್ಯದ ಹಿಂದಿರುವವರನ್ನು ಹುಡುಕಿ ಬೇಟೆಯಾಡುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಮೆರಿಕದ ಒರೆಮ್ ನಗರದ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಭಾಷಣ ಮಾಡುತ್ತಿದ್ದ ಚಾರ್ಲಿ ಕಿರ್ಕ್ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದಾನೆ. ಗುಂಡು ಕಿರ್ಕ್ ಅವರ ಕುತ್ತಿಗೆಯನ್ನು ಸೀಳಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಅಮೆರಿಕದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
‘ಕಿರ್ಕ್ ಹತ್ಯೆ ಸಂಪ್ರದಾಯವಾದಿಗಳ ಮೇಲಿನ ಉದಾರವಾದಿ ದ್ವೇಷದಿಂದ ಹುಟ್ಟಿದ ಭಯೋತ್ಪಾದನಾ ಕೃತ್ಯ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಎಡಪಂಥೀಯರಿಂದ ಆಗುತ್ತಿರುವ ಹಿಂಸಾಚಾರ ಮುಗ್ಧ ಜನರು ನೋವು ಅನುಭವಿಸುವಂತೆ ಮಾಡಿದೆ. ಸಂಪ್ರದಾಯವಾದಿಗಳ ಮೇಲಿನ ಟೀಕೆಗಳು ನಮ್ಮ ದೇಶದಲ್ಲಿ ನಾವು ನೋಡುತ್ತಿರುವ ಭಯೋತ್ಪಾದನೆಗೆ ನೇರ ಕಾರಣವಾಗಿದ್ದು, ಇದು ಈಗಲೇ ನಿಲ್ಲಬೇಕು’ ಎಂದು ಗುಡುಗಿದ್ದಾರೆ.
31 ವರ್ಷದ ಕಿರ್ಕ್ ಅಮೆರಿಕದ ಅತ್ಯಂತ ಪ್ರಮುಖ ಬಲಪಂಥೀಯ ಯುವ ಸಂಘಟನೆ ‘ಟರ್ನಿಂಗ್ ಪಾಯಿಂಟ್’ನ ಸ್ಥಾಪಕರಾಗಿದ್ದಾರೆ. ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರು 3,000 ಜನರನ್ನು ಉದ್ದೇಶಿಸಿ ಕಿರ್ಕ್ ಮಾತನಾಡುತ್ತಿದ್ದರು. ಇದೇ ವೇಳೆ ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಘಟನೆ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿತ್ತು. ತೀವ್ರ ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ತನಿಖೆ ಮುಂದುವರೆದಿದೆ’ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.