ಅಮೆರಿಕ– ಚೀನಾ ವ್ಯಾಪಾರ ಯುದ್ಧ
ಬೀಜಿಂಗ್: ಜಪಾನ್‌ನಲ್ಲಿ ನಿಯೋಜಿಸಲಾಗಿರುವ ಮಧ್ಯಮ ಶ್ರೇಣಿಯ ಟೈಫನ್ ಕ್ಷಿಪಣಿ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳುವಂತೆ ಚೀನಾ ಮಂಗಳವಾರ ಅಮೆರಿಕವನ್ನು ಒತ್ತಾಯಿಸಿದೆ. ಇದು ಪ್ರಾದೇಶಿಕ ಕಾರ್ಯತಂತ್ರದ ಭದ್ರತೆಗೆ ಗಣನೀಯ ಬೆದರಿಕೆಯನ್ನು ಒಡ್ಡುತ್ತದೆ ಎಂದು ಚೀನಾ ಹೇಳಿದೆ.
ಚೀನಾದ ಗಂಭೀರ ಕಳವಳವನ್ನು ಕಡೆಗಣಿಸಿ, ಜಂಟಿ ಮಿಲಿಟರಿ ಸಮರಾಭ್ಯಾಸದ ನೆಪದಲ್ಲಿ ಜಪಾನ್‌ನಲ್ಲಿ ಟೈಫನ್ ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸುವ ಯೋಜನೆಯನ್ನು ಅಮೆರಿಕ ಮತ್ತು ಜಪಾನ್ ಮುಂದುವರೆಸಿದವು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಅಮೆರಿಕದ ಕ್ರಮವನ್ನು ಚೀನಾ ಬಲವಾಗಿ ಖಂಡಿಸುತ್ತದೆ ಮತ್ತು ದೃಢವಾಗಿ ವಿರೋಧಿಸುತ್ತದೆ. ಏಷ್ಯಾದ ದೇಶಗಳಲ್ಲಿ ಟೈಫನ್ ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಯನ್ನು ಅಮೆರಿಕ ನಿಯೋಜಿಸುವುದರಿಂದ ಇತರ ದೇಶಗಳ ಕಾನೂನುಬದ್ಧ ಭದ್ರತಾ ಹಿತಾಸಕ್ತಿಗಳನ್ನು ಹಾಳುಮಾಡುತ್ತದೆ. ಪ್ರಾದೇಶಿಕ ಶಸ್ತ್ರಾಸ್ತ್ರ ಸ್ಪರ್ಧೆ ಮತ್ತು ಮಿಲಿಟರಿ ಮುಖಾಮುಖಿಯ ಅಪಾಯವನ್ನು ಹೆಚ್ಚಿಸುತ್ತದೆ. ಪ್ರಾದೇಶಿಕ ಕಾರ್ಯತಂತ್ರದ ಭದ್ರತೆಗೆ ಗಣನೀಯ ಬೆದರಿಕೆಯನ್ನು ಒಡ್ಡುತ್ತದೆ’ಎಂದು ಅವರು ಹೇಳಿದ್ದಾರೆ.
ಅಮೆರಿಕ ಮತ್ತು ಜಪಾನ್ ಇತರ ದೇಶಗಳ ಭದ್ರತಾ ಕಳವಳಗಳನ್ನು ಪ್ರಾಮಾಣಿಕವಾಗಿ ಗೌರವಿಸಬೇಕು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಸಕಾರಾತ್ಮಕ ಪಾತ್ರವನ್ನು ವಹಿಸಬೇಕುಎಂದು ಅವರು ತಿಳಿಸಿದ್ದಾರೆ.
‘ನಮ್ಮ ಕರೆಗೆ ಕಿವಿಗೊಡುವಂತೆ, ತಪ್ಪು ಕ್ರಮವನ್ನು ಸರಿಪಡಿಸಲು ಟೈಫನ್ ಕ್ಷಿಪಣಿ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಬೇಗ ಹಿಂತೆಗೆದುಕೊಳ್ಳುವಂತೆ ಅಮೆರಿಕ ಮತ್ತು ಜಪಾನ್ ಅನ್ನು ಚೀನಾ ಒತ್ತಾಯಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, ದಕ್ಷಿಣ ಚೀನಾ ಸಮುದ್ರದ ಕುರಿತು ಮನಿಲಾ ಜೊತೆಗಿನ ವಿವಾದದಲ್ಲಿ ಸಿಲುಕಿರುವ ಫಿಲಿಪೈನ್ಸ್‌ನಲ್ಲಿ ಟೈಫನ್ ನಿಯೋಜನೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು.
ಫಿಲಿಪೈನ್ಸ್ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಸಹ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.