ADVERTISEMENT

ಭಾರತವನ್ನು ಹೊಗಳಿದ ಚೀನಾ: ಏಕೆ?

ಪಿಟಿಐ
Published 9 ಜೂನ್ 2022, 1:51 IST
Last Updated 9 ಜೂನ್ 2022, 1:51 IST
   

ಬೀಜಿಂಗ್‌: ಅಪರೂಪದ ವಿದ್ಯಮಾನವೊಂದರಲ್ಲಿ ಭಾರತವನ್ನು ಚೀನಾ ಶ್ಲಾಘಿಸಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ನೆರವಿನ ಹಸ್ತ ಚಾಚಿರುವುದನ್ನು ಚೀನಾ ಹೊಗಳಿದೆ.

ಈ ಮಧ್ಯೆ, ಚೀನಾ ತನ್ನ ಕಾರ್ಯತಂತ್ರ ಲಕ್ಷ್ಯವನ್ನು ದಕ್ಷಿಣ ಏಷ್ಯಾದಿಂದ ಆಗ್ನೇಯ ಏಷ್ಯಾಕ್ಕೆ ವರ್ಗಾಯಿಸಿದೆ ಎಂಬ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಹೇಳಿಕೆಯನ್ನು ಚೀನಾ ನಿರಾಕರಿಸಿದ್ದು, ದಕ್ಷಿಣ ಏಷ್ಯಾ ವಲಯವು ಈಗಲೂ ತನ್ನ ಅದ್ಯತಾ ವಲಯವಾಗಿಯೇ ಉಳಿದಿದೆ ಎಂದು ಸ್ಪಷ್ಟಪಡಿಸಿದೆ.

ಶ್ರೀಲಂಕಾದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆಗಳನ್ನು ಮಾಡಿರುವ ಚೀನಾ, ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅದಕ್ಕೆ ಸಹಾಯ ಮಾಡಲು ಹಿಂಜರಿಯುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ‘ಶ್ರೀಲಂಕಾಕ್ಕೆ ನೆರವಾಗುವ ನಿಟ್ಟಿನಲ್ಲಿ ಭಾರತ ಸರ್ಕಾರವು ಸಾಕಷ್ಟು ಪ್ರಯತ್ನ ಮಾಡಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ಆ ಪ್ರಯತ್ನಗಳನ್ನು ನಾವು ಶ್ಲಾಘಿಸುತ್ತೇವೆ. ಶ್ರೀಲಂಕಾ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗಲು ಭಾರತ ಮತ್ತು ಇತರ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಕೆಲಸ ಮಾಡಲು ಚೀನಾ ಸದಾ ಸಿದ್ಧವಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಚೀನಾದ ₹3.9 ಲಕ್ಷ ಕೋಟಿ ಋಣಭಾರ ಹೊಂದಿರುವ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ಭಾರತವು ಲೈನ್ ಆಫ್‌ ಕ್ರೆಡಿಟ್ ಅಥವಾ ಎಲ್‌ಒಸಿ (ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ) ಆಧಾರದಲ್ಲಿ ಮತ್ತು ಇತರ ರೂಪದಲ್ಲಿ ಸುಮಾರು 3 ಶತಕೋಟಿ ಡಾಲರ್‌ (₹23,328 ಕೋಟಿ) ಸಹಾಯವನ್ನು ಈವರೆಗೆ ನೀಡಿದೆ.

ಅಗತ್ಯ ವಸ್ತುಗಳ ಪೂರೈಕೆಗಾಗಿ ಚೀನಾ, ಶ್ರೀಲಂಕಾಕ್ಕೆ 500 ಮಿಲಿಯನ್ ಆರ್‌ಎಂಬಿ (₹575 ಕೋಟಿ) ನೆರವನ್ನು ಘೋಷಿಸಿದೆ. ಆದರೆ ಸಾಲ ಮರುಪಾವತಿಯನ್ನು ಮುಂದೂಡಬೇಕೆಂಬ ಅಧ್ಯಕ್ಷ ರಾಜಪಕ್ಸ ಅವರ ವಿನಂತಿಯ ಬಗ್ಗೆ ಮೌನ ವಹಿಸಿದೆ. ಹೊಸದಾಗಿ ₹19.4 ಸಾವಿರ ಕೋಟಿ (2.5 ಶತಕೋಟಿ ಡಾಲರ್‌) ಸಾಲ ಒದಗಿಸುವ ತನ್ನ ಹಿಂದಿನ ಘೋಷಣೆ ಬಗ್ಗೆಯೂ ಚೀನಾ ಮಾತನಾಡುತ್ತಿಲ್ಲ.

ಚೀನಾವು ತನ್ನ ಕಾರ್ಯತಂತ್ರದ ಲಕ್ಷ್ಯವನ್ನು ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಕಡೆಗೆ ಬದಲಾಯಿಸುತ್ತಿದೆ ಎಂದು ತೋರುತ್ತಿದೆ ಎಂದು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಸೋಮವಾರ ಹೇಳಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಆರ್ಥಿಕ ತೊಂದರೆಯಲ್ಲಿರುವ ದಕ್ಷಿಣ ಏಷ್ಯಾದ ದೇಶಗಳ ಕಡೆಗೆ ಚೀನಾ ಮೊದಲಿನಂತೆ ಗಮನ ಕೊಡುತ್ತಿಲ್ಲ. ನನ್ನ ಅಭಿಪ್ರಾಯ ಸರಿಯೋ, ಅಲ್ಲವೋ ನನಗೆ ಗೊತ್ತಿಲ್ಲ. ಚೀನಾ ಈಗ ಪಾಕಿಸ್ತಾನದ ಕಡೆಗೂ ಗಮನಹರಿಸುತ್ತಿಲ್ಲ. ಈಗ ಚೀನಾದ ಗಮನವೇನಿದ್ದರೂ, ಫಿಲಿಪ್ಪೀನ್ಸ್‌, ವಿಯೆಟ್ನಾಂ, ಕಾಂಬೋಡಿಯಾದ ಕಡೆಗೆ ಎಂದು ಅವರು ಆರೋಪಿಸಿದ್ದರು.

ಇದಕ್ಕೆ ಉತ್ತರಿಸಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೋ, ‘ಶ್ರೀಲಂಕಾ ಎದುರಿಸುತ್ತಿರುವ ತೊಂದರೆಗಳು ಮತ್ತು ಸವಾಲುಗಳನ್ನು ಸಾಂಪ್ರದಾಯಿಕ, ಸ್ನೇಹಪರ ನೆರೆ ರಾಷ್ಟ್ರವಾಗಿ ಚೀನಾ ಸೂಕ್ಷ್ಮವಾಗಿ ಗಮನಿಸುತ್ತದೆ. ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತದೆ. ಶ್ರೀಲಂಕಾದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ನಮ್ಮ ಕೈಲಾದಷ್ಟು ನೆರವನ್ನು ನಾವು ನೀಡಿದ್ದೇವೆ’ ಎಂದು ಹೇಳಿದರು.

1948ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಇದೇ ಮೊದಲ ಬಾರಿಗೆ ತೀವ್ರ ಆರ್ಥಿಕ ಸಂಕಷ್ಟವನ್ನು ಶ್ರೀಲಂಕಾ ಎದುರಿಸುತ್ತಿದ್ದು, ರಾಜಕೀಯ ವಿಪ್ಲವಗಳಿಗೂ ಕಾರಣವಾಗಿವೆ. ಹೀಗಾಗಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಅಧಿಕಾರದಿಂದ ಕೆಳಗಿಳಿಯುವಂತಾಯಿತು. ಇನ್ನೊಂದೆಡೆ, ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ರಾಜೀನಾಮೆಗೂ ಆಗ್ರಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.