ADVERTISEMENT

ಗಡಿ ವಿವಾದ: ಹೊಸ ಭೂ ಗಡಿ ಕಾನೂನು ಅಂಗೀಕರಿಸಿದ ಚೀನಾ

ಪಿಟಿಐ
Published 24 ಅಕ್ಟೋಬರ್ 2021, 7:52 IST
Last Updated 24 ಅಕ್ಟೋಬರ್ 2021, 7:52 IST
.
.   

ಬೀಜಿಂಗ್‌: ಚೀನಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪ್ರತಿಪಾದಿಸಿರುವ ದೇಶದ ರಾಷ್ಟ್ರೀಯ ಶಾಸಕಾಂಗವು, ಭೂ ಗಡಿ ಪ್ರದೇಶಗಳ ರಕ್ಷಣೆ ಕುರಿತ ಹೊಸ ಕಾನೂನೊಂದನ್ನು ಅಂಗೀಕರಿಸಿದೆ.

ಈ ಹೊಸ ಕಾನೂನು ಭಾರತದೊಂದಿಗಿನ ಚೀನಾದ ಗಡಿ ವಿವಾದದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ (ಎನ್‌ಪಿಸಿ) ಸ್ಥಾಯಿ ಸಮಿತಿಯ ಸದಸ್ಯರು ಶನಿವಾರ ನಡೆದ ಶಾಸಕಾಂಗ ಅಧಿವೇಶನದ ಸಮಾರೋಪ ಸಭೆಯಲ್ಲಿ ಕಾನೂನನ್ನು ಅನುಮೋದಿಸಿದರು ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

‘ಮುಂದಿನ ವರ್ಷ ಜನವರಿ 1ರಿಂದ ಕಾನೂನು ಜಾರಿಗೊಳ್ಳಲಿದೆ. ಚೀನಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯು ಪವಿತ್ರವಾಗಿದ್ದು, ಇದನ್ನು ಯಾರಿಂದಲೂ ಉಲ್ಲಂಘಿಸಲು ಸಾಧ್ಯವಿಲ್ಲ’ ಎಂದು ವರದಿ ಹೇಳಿದೆ.

ದೇಶವು ಪ್ರಾದೇಶಿಕ ಸಮಗ್ರತೆ ಮತ್ತು ಭೂ ಗಡಿಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಭೂ ಗಡಿಗಳನ್ನು ದುರ್ಬಲಗೊಳಿಸುವ ಯಾವುದೇ ಕೃತ್ಯದ ವಿರುದ್ಧ ಹೋರಾಡುತ್ತದೆ ಎಂದು ವರದಿ ಹೇಳಿದೆ.

ದೇಶದ ಗಡಿಗಳನ್ನು ಬಲಪಡಿಸುವುದು, ಗಡಿ ಪ್ರದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ, ಈ ಪ್ರದೇಶಗಳಲ್ಲಿ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲು ಕಾನೂನಿನಲ್ಲಿ ಷರತ್ತು ವಿಧಿಸಲಾಗಿದೆ ಎಂದೂ ತಿಳಿಸಲಾಗಿದೆ.

ಭಾರತ ಮತ್ತು ಭೂತಾನ್‌ನೊಂದಿಗೆ ಚೀನಾ ಇನ್ನೂ ಗಡಿ ಒಪ್ಪಂದಗಳನ್ನು ಅಂತಿಮಗೊಳಿಸಿಲ್ಲ. ಚೀನಾವು ಇತರ 12 ದೇಶಗಳೊಂದಿಗಿನ ಗಡಿ ವಿವಾದವನ್ನು ಈಗಾಗಲೇ ಬಗೆಹರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.