ADVERTISEMENT

ಅಮೆರಿಕ ಅಸ್ತಿತ್ವಕ್ಕೆ ಚೀನಾದಿಂದ ಬೆದರಿಕೆ: ಮೈಕ್‌ ಗ್ಯಾಲೆಗರ್

ಪಿಟಿಐ
Published 1 ಮಾರ್ಚ್ 2023, 14:24 IST
Last Updated 1 ಮಾರ್ಚ್ 2023, 14:24 IST
ಮೈಕ್‌ ಗ್ಯಾಲೆಗರ್
ಮೈಕ್‌ ಗ್ಯಾಲೆಗರ್   

ವಾಷಿಂಗ್ಟನ್: ‘ಅಮೆರಿಕಕ್ಕೆ ಚೀನಾದಿಂದ ಬೆದರಿಕೆ ಇದೆ. ಕಮ್ಯುನಿಸ್ಟ್‌ ಪಾರ್ಟಿ ನಾಯಕತ್ವದ ಆ ರಾಷ್ಟ್ರ ಒಡ್ಡುವ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು’ ಎಂದು ಅಮೆರಿಕದ ಸಂಸದರು ಪ್ರತಿಪಾದಿಸಿದ್ದಾರೆ.

ಅಮೆರಿಕ ಸಂಸತ್‌ನ ಕೆಳಮನೆಯಲ್ಲಿ (ಹೌಸ್‌ ಆಫ್‌ ರೆಪ್ರಸೆಂಟೇಟಿವ್) ನಡೆದ ‘ಚೀನಾ ಕಮ್ಯುನಿಸ್ಟ್‌ ಪಾರ್ಟಿ ಕುರಿತ ಸದನ ಸಮಿತಿ’ಯ ಸಭೆಯಲ್ಲಿ ಸಂಸದರು ಈ ಮಾತುಗಳನ್ನಾಡಿದ್ದಾರೆ.

‘ಅಮೆರಿಕ, ಚೀನಾ ನಡುವೆ ಸ್ನೇಹಪರ ಟೆನಿಸ್‌ ಪಂದ್ಯವೇನೂ ನಡೆಯುತ್ತಿಲ್ಲ. ನಮ್ಮ ಅಸ್ತಿತ್ವಕ್ಕೆ ಧಕ್ಕೆ ಒದಗಿದೆ. ನಮ್ಮ ಸ್ವಾತಂತ್ರ್ಯಕ್ಕೆ ಸಂಚಕಾರ ಬಂದಿದೆ. ಇದರ ವಿರುದ್ಧ ನಾವೆಲ್ಲಾ ಹೋರಾಟ ನಡೆಸಬೇಕು’ ಎಂದು ಸಮಿತಿ ಅಧ್ಯಕ್ಷ ಮೈಕ್‌ ಗ್ಯಾಲೆಗರ್ ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಚೀನಾ ಒಡ್ಡಿರುವ ಸವಾಲುಗಳಿಗೆ ಪ್ರತಿಯಾಗಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಮುಂದಿನ ಹತ್ತು ವರ್ಷಗಳಲ್ಲಿ ನಾವು ಕೈಗೊಳ್ಳುವ ನಿರ್ಧಾರಗಳು, ತೆಗೆದುಕೊಳ್ಳುವ ಕ್ರಮಗಳು ನಂತರದ ನೂರು ವರ್ಷಗಳಿಗೆ ವೇದಿಕೆಯನ್ನು ನಿರ್ಮಿಸುತ್ತವೆ’ ಎಂದು ಅವರು ಹೇಳಿದರು.

ಈ ಮಾತಿಗೆ ಭಾರತೀಯ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.