ADVERTISEMENT

ಚಂದ್ರನ ಮೇಲ್ಮೈಯಿಂದ ಕಲ್ಲು, ಮಣ್ಣಿನ ಮಾದರಿ ಸಂಗ್ರಹಕ್ಕೆ ಮುಂದಾದ ಚೀನಾ

ಮಂಗಳವಾರ ಬೆಳಗ್ಗೆ ಚಾಂಗ್‌ಇ–5 ಪ್ರೊಬ್‌ ಉಡಾವಣೆ

ಏಜೆನ್ಸೀಸ್
Published 23 ನವೆಂಬರ್ 2020, 14:21 IST
Last Updated 23 ನವೆಂಬರ್ 2020, 14:21 IST
ಚಾಂಗ್‌ಇ–5 ಪ್ರೊಬ್‌ ಹೊತ್ತ ಲಾಂಗ್‌ ಮಾರ್ಕ್‌ 5 ರಾಕೆಟ್‌ (ಸಂಗ್ರಹ ಚಿತ್ರ)
ಚಾಂಗ್‌ಇ–5 ಪ್ರೊಬ್‌ ಹೊತ್ತ ಲಾಂಗ್‌ ಮಾರ್ಕ್‌ 5 ರಾಕೆಟ್‌ (ಸಂಗ್ರಹ ಚಿತ್ರ)   

ಬೀಜಿಂಗ್‌: ಚಂದ್ರನ ಮೇಲ್ಮೈಯಿಂದ ಕಲ್ಲುಗಳನ್ನು ತರಲು ಮಾನವರಹಿತ ನೌಕೆಯೊಂದನ್ನು ಚೀನಾ ಮಂಗಳವಾರ ಉಡಾವಣೆಗೊಳಿಸಲಿದೆ. ಕಳೆದ ನಾಲ್ಕು ದಶಕಗಳ ಬಳಿಕ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ತರುವ ಮೊದಲ ಯೋಜನೆ ಇದಾಗಿದೆ.

2022ರೊಳಗಾಗಿ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸುವ ಗುರಿ ಹೊಂದಿರುವ ಚೀನಾ ಮಾನವಸಹಿತ ಚಂದ್ರಯಾನದ ಯೋಜನೆಯನ್ನೂ ಹಾಕಿಕೊಂಡಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿಯನ್ನೂ ವ್ಯಯಿಸುತ್ತಿದೆ. ಚಂದ್ರನ ಮೇಲ್ಮೈಯಲ್ಲಿರುವ ಜ್ವಾಲಾಮುಖಿಯ ಚಟುವಟಿಕೆ, ಚಂದ್ರನ ರಚನೆಯನ್ನು ಅಧ್ಯಯನ ನಡೆಸುವ ಉದ್ದೇಶದಿಂದ ಮೇಲ್ಮೈಯಲ್ಲಿರುವ ಕಲ್ಲುಗಳು, ಮಣ್ಣನ್ನು(ಎರಡು ಕೆ.ಜಿ) ‘ಚಾಂಗ್‌ಇ–5 ಪ್ರೊಬ್‌’ ಹೊತ್ತುತರಲಿದೆ. ಮಂಗಳವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 4 ರಿಂದ 5 ಗಂಟೆಗೆ ಉಡಾವಣೆಗೊಂಡರೆ, ನವೆಂಬರ್‌ ಅಂತ್ಯದಲ್ಲಿ ಈ ಪ್ರೊಬ್‌ ಚಂದ್ರನಲ್ಲಿಗೆ ತಲುಪಲಿದೆ. ಮಾದರಿಗಳನ್ನು ಹೊತ್ತ ಪ್ರೊಬ್‌ ಡಿಸೆಂಬರ್‌ನಲ್ಲಿ ಚೀನಾದ ಮಂಗೋಲಿಯಾ ಪ್ರದೇಶದಲ್ಲಿ ಇಳಿಯಲಿದೆ.

2017ರಲ್ಲಿ ಈ ರಾಕೆಟ್‌ ಉಡಾವಣೆಗೊಳಿಸಲು ಚೀನಾ ನಿರ್ಧರಿಸಿತ್ತು. ಆದರೆ ಲಾಂಗ್‌ ಮಾರ್ಕ್‌ 5 ರಾಕೆಟ್‌ನ ಎಂಜಿನ್‌ನಲ್ಲಿ ದೋಷ ಕಂಡುಬಂದ ಕಾರಣ, ಉಡಾವಣೆ ಮುಂದೂಡಲಾಗಿತ್ತು. ಈ ಯೋಜನೆ ಯಶಸ್ವಿಯಾದಲ್ಲಿ, ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿದ ವಿಶ್ವದ ಮೂರನೇ ರಾಷ್ಟ್ರವಾಗಿ ಚೀನಾ ಗುರುತಿಸಿಕೊಳ್ಳಲಿದೆ. 1960ರಲ್ಲಿ ಹಾಗೂ 1970ರಲ್ಲಿ ಕ್ರಮವಾಗಿ ಅಮೆರಿಕ ಹಾಗೂ ಸೋವಿಯತ್‌ ಯೂನಿಯನ್‌ ಚಂದ್ರನಿಂದ ಮಾದರಿಗಳನ್ನು ಸಂಗ್ರಹಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.