ADVERTISEMENT

ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಿ ಹೆಸರು: ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಚೀನಾ

ಪಿಟಿಐ
Published 1 ಏಪ್ರಿಲ್ 2024, 6:22 IST
Last Updated 1 ಏಪ್ರಿಲ್ 2024, 6:22 IST
<div class="paragraphs"><p>ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರು– ಸಂಗ್ರಹ ಚಿತ್ರ</p></div>

ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರು– ಸಂಗ್ರಹ ಚಿತ್ರ

   

ಬೀಜಿಂಗ್‌: ‘ಭಾರತದ ಅರುಣಾಚಲ ಪ್ರದೇಶದ ವಿವಿಧ ‌ಸ್ಥಳಗಳಿಗೆ 30 ಹೊಸ ಹೆಸರಿರುವ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಅರುಣಾಚಲ ಪ್ರದೇಶ ರಾಜ್ಯದ ಮೇಲೆ ತನ್ನ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿರುವ ಚೀನಾ, ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ.

ADVERTISEMENT

ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಮಾಡುವುದನ್ನು ವಿರೋಧಿಸಿರುವ ಭಾರತ, ‘ಅರುಣಾಚಲ ಪ್ರದೇಶ ದೇಶದ ಅವಿಭಾಜ್ಯ ಅಂಗ. ಇಲ್ಲಿನ ಪ್ರದೇಶಗಳಿಗೆ ಹೊಸದಾಗಿ ನಾಮಕರಣ  ಮಾಡುವುದರಿಂದ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದೆ.

‘ಝಂಗ್ನಾನ್‌ನ (ಅರುಣಾಚಲ ಪ್ರದೇಶಕ್ಕೆ ಚೀನಾ ಇಟ್ಟಿರುವ ಹೆಸರು) ವಿವಿಧ ಪ್ರದೇಶಗಳಿಗೆ 30 ಚೀನಿ ಹೆಸರಿರುವ ಪಟ್ಟಿಯನ್ನು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದೆ’ ಎಂದು ಗ್ಲೋಬಲ್‌ ಟೈಮ್ಸ್‌ ತಿಳಿಸಿದೆ.

‘ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಸರುಗಳನ್ನು ಘೋಷಿಸಲಾಗಿದ್ದು, ಇವು ಮೇ 1ರಿಂದ ಜಾರಿಗೆ ಬರಲಿವೆ’ ಎಂದೂ ಅದು ಮಾಹಿತಿ ನೀಡಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು 2017ರಲ್ಲಿ ಆರು, 2021ರಲ್ಲಿ 15 ಹಾಗೂ 2023ರಲ್ಲಿ 11 ಸ್ಥಳಗಳಿಗೆ ಹೊಸ ಹೆಸರುಗಳ ಪಟ್ಟಿಯನ್ನು ಪ್ರಕಟಿಸಿತ್ತು.

ಪ್ರತೀಕಾರದ ಕ್ರಮ?: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾಗ, 13 ಸಾವಿರ ಅಡಿ ಉದ್ದದ ಸೇಲಾ ಸುರಂಗವನ್ನು ಉದ್ಘಾಟಿಸಿದ್ದರು. ಇದಕ್ಕೆ ಪ್ರತೀಕಾರ ಕ್ರಮವಾಗಿ ಚೀನಾ ಹೊಸ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ.

ಸೇನೆಯ ಸುಲಭ ಸಂಚಾರಕ್ಕೆ ಮತ್ತು ಆಯಕಟ್ಟಿನ ಸ್ಥಳವಾದ ತವಾಂಗ್‌ಗೆ ಸರಾಗವಾಗಿ ಸಂಪರ್ಕ ಕಲ್ಪಿಸಲು ಈ  ಸುರಂಗ ಸಹಾಯಕವಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.