ADVERTISEMENT

ಮಾಲ್ದೀವ್ಸ್‌ ಸಾರ್ವಭೌಮತ್ವ ರಕ್ಷಣೆಗೆ ಬೆಂಬಲ: ಚೀನಾ

ಪಿಟಿಐ
Published 12 ಮಾರ್ಚ್ 2024, 14:25 IST
Last Updated 12 ಮಾರ್ಚ್ 2024, 14:25 IST
   

ಬೀಜಿಂಗ್‌: ಮಾಲ್ದೀವ್ಸ್‌ಗೆ ತನ್ನ ಸಾರ್ವಭೌಮತ್ವ ರಕ್ಷಿಸಿಕೊಳ್ಳಲು ಬೆಂಬಲ ನೀಡಲಾಗುವುದು ಎಂದು ಚೀನಾ ಮಂಗಳವಾರ ಹೇಳಿದೆ. 

ಹೆಲಿಕಾಪ್ಟರ್‌ನ ಕಾರ್ಯಾಚರಣೆಯ ನಿರ್ವಹಣೆಗೆ ಮಾಲ್ದೀವ್ಸ್‌ನಲ್ಲಿ ನೆಲೆ ನಿಂತಿದ್ದ ಭಾರತೀಯ ಸೇನಾ ಸಿಬ್ಬಂದಿ ಹೆಲಿಕಾಪ್ಟರ್‌ನ ಕಾರ್ಯಾಚರಣೆ ಹೊಣೆಯನ್ನು ಭಾರತೀಯ ನಾಗರಿಕ ಅಧಿಕಾರಿಗಳಿಗೆ ಹಸ್ತಾಂತರಿಸಿದ ನಂತರ ದೇಶ ತೊರೆದರು ಎಂದು ಮಾಲ್ದೀವ್ಸ್‌ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ಮಾಲ್ದೀವ್ಸ್‌ನಿಂದ ಭಾರತೀಯ ಸೇನಾ ಸಿಬ್ಬಂದಿಯ ಮೊದಲ ತಂಡದ ವಾಪಸಾತಿಯ ಕುರಿತು ಕೇಳಲಾದ ಪ್ರತಿಕ್ರಿಯೆಗೆ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಅವರು ಈ ಬಗ್ಗೆ ನಿರ್ದಿಷ್ಟ ವಿವರ ತಿಳಿದಿಲ್ಲ ಎಂದರು.

ADVERTISEMENT

‘ಮಾಲ್ದೀವ್ಸ್‌ಗೆ ತನ್ನ ಸಾರ್ವಭೌಮತ್ವ ರಕ್ಷಿಸಿಕೊಳ್ಳಲು ಚೀನಾ ಬೆಂಬಲ ನೀಡಲಿದೆ ಮತ್ತು ಇದೇ ರೀತಿಯಾಗಿ ಇತರ ದೇಶಗಳೊಂದಿಗೆ ಕೆಲಸ ಮಾಡಲಿದೆ’ ಎಂದು ಅವರು ಹೇಳಿದರು.

ಚೀನಿ ಪರ ಒಲವು ಹೊಂದಿರುವ ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು, ಮೇ 10ರ ನಂತರ ಯಾವುದೇ ಭಾರತೀಯ ಮಿಲಿಟರಿ ಸಿಬ್ಬಂದಿ ನಾಗರಿಕ ಉಡುಪಿನಲ್ಲೂ ತಮ್ಮ ದೇಶದೊಳಗೆ ಇರುವುದಿಲ್ಲ ಎಂದು ಹೇಳಿದ್ದರು. 

ಮಾಲ್ದೀವ್ಸ್‌ನಿಂದ 90 ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಮುಯಿಝು ಭಾರತವನ್ನು ಒತ್ತಾಯಿಸಿದ್ದು, ಸೇನಾ ಸಿಬ್ಬಂದಿ ಜಾಗದಲ್ಲಿ ನಾಗರಿಕ ಅಧಿಕಾರಿ ಸಿಬ್ಬಂದಿ ನೇಮಿಸಿ, ಮಾನವೀಯ ಮತ್ತು ವೈದ್ಯಕೀಯ ನೆರವಿನ ಸೇವೆಗೆ ದೇಶಕ್ಕೆ ಒದಗಿಸಲಾದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ವಿಮಾನದ ಕಾರ್ಯಾಚರಣೆಯನ್ನು ಮುಂದುವರಿಸಲು ಭಾರತ ಒಪ್ಪಿಕೊಂಡಿದೆ.

ಮುಯಿಝು ಅವರ ಸರ್ಕಾರ ಚೀನಾದ ಅತ್ಯಾಧುನಿಕ ‘ಸಂಶೋಧನಾ ಹಡಗು’ ಮಾಲೆಯಲ್ಲಿ ಲಂಗರು ಹಾಕಲು ಅವಕಾಶ ನೀಡಿದೆ. ಅಲ್ಲದೆ, ಕಳೆದ ವಾರ ಮಾಲ್ದೀವ್ಸ್‌ ರಾಷ್ಟ್ರೀಯ ರಕ್ಷಣಾ ಪಡೆ (ಎಂಎನ್‌ಡಿಎಫ್‌) ಚೀನಾ ಸೇನೆ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದದ ಅಡಿಯಲ್ಲಿ ಚೀನಾ ಮಾಲ್ದೀವ್ಸ್‌ಗೆ ‘ಮಾರಕವಲ್ಲದ’ ಶಸ್ತ್ರಾಸ್ತ್ರಗಳನ್ನು ಉಚಿತವಾಗಿ ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.