ADVERTISEMENT

ವೈರಸ್‌: ಚೀನಾದ 13 ನಗರಗಳಲ್ಲಿ ನಿರ್ಬಂಧ, ಸಂಕಷ್ಟಕ್ಕೆ ಸಿಲುಕಿದ ನಾಗರಿಕರು

ಏಜೆನ್ಸೀಸ್
Published 24 ಜನವರಿ 2020, 19:35 IST
Last Updated 24 ಜನವರಿ 2020, 19:35 IST
ವೈರಸ್‌ ಭೀತಿಯಿಂದ ನಿರ್ಬಂಧ ವಿಧಿಸಿರುವುದರಿಂದ ವುಹಾನ್‌ ನಗರದ ಮಾರುಕಟ್ಟೆಯಲ್ಲಿ ಶುಕ್ರವಾರ ವಹಿವಾಟು ಸ್ಥಗಿತಗೊಂಡಿತ್ತು. -ಎಎಫ್‌ಪಿ ಚಿತ್ರ
ವೈರಸ್‌ ಭೀತಿಯಿಂದ ನಿರ್ಬಂಧ ವಿಧಿಸಿರುವುದರಿಂದ ವುಹಾನ್‌ ನಗರದ ಮಾರುಕಟ್ಟೆಯಲ್ಲಿ ಶುಕ್ರವಾರ ವಹಿವಾಟು ಸ್ಥಗಿತಗೊಂಡಿತ್ತು. -ಎಎಫ್‌ಪಿ ಚಿತ್ರ   

ಬೀಜಿಂಗ್/ವುಹಾನ್‌: ಮಾರಕ ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಜನರು ಮತ್ತು ವಾಹನಗಳ ಸಂಚಾರದ ಮೇಲಿನ ನಿರ್ಬಂಧವನ್ನು ಚೀನಾ ಇದುವರೆಗೆ ಒಟ್ಟು 13 ನಗರಗಳಿಗೆ ವಿಸ್ತರಿಸಿದೆ. ಇದರಿಂದ, ಅಂದಾಜು 4.1 ಕೋಟಿ ನಾಗರಿಕರ ಜನಜೀವನದ ಮೇಲೆ ಪರಿಣಾಮ ಬೀರಿದೆ.

ಪ್ರಮುಖವಾಗಿ ಸೋಂಕು ಕಾಣಿಸಿಕೊಂಡಿರುವ ಹುಬೇ ಪ್ರಾಂತ್ಯದ ವ್ಯಾಪ್ತಿಯಲ್ಲಿರುವ ಕ್ಸಿಯಾನಿಂಗ್, ಕ್ಸಿಯೊಗಾನ್‌, ಝಿಜಿಯಾಂಗ್‌ ನಗರಗಳಲ್ಲಿಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರದ್ದುಪಡಿಸಲಾಗಿದೆ.

ಸುಮಾರು 5.5 ಲಕ್ಷ ಜನಸಂಖ್ಯೆಯುಳ್ಳ ಝಿಜಿಯಾಂಗ್‌ ನಗರದಲ್ಲಿ ಔಷಧ ಕೇಂದ್ರ ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆ ಸ್ಥಗಿತವಾಗಿದೆ. 8 ಲಕ್ಷ ಜನಸಂಖ್ಯೆಯುಳ್ಳ ಎನ್ಷಿಯಲ್ಲಿ ಎಲ್ಲ ಮನರಂಜನಾ ಕೇಂದ್ರಗಳಿಗೆ ಬೀಗಮುದ್ರೆ ಘೋಷಿಸಲಾಗಿದೆ.ಉಳಿದಂತೆ ಕ್ಸಿಯಾಂಟೊ, ಚಿಬಿ, ಎಜೌ, ಲಿಚುಯಾನ್‌ ನಗರಗಳಲ್ಲಿ ನಿರ್ಬಂಧ ಹೇರಲಾಗಿದೆ.

ADVERTISEMENT

ಜತೆಗೆ, ಚೀನಾದ ಮಹಾ ಗೋಡೆಯ ಕೆಲವು ಭಾಗಗಳಿಗೆ ಮತ್ತು ಇತರ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಇನ್ನೊಂದೆಡೆ, ಸೋಂಕಿನಿಂದ 26 ಜನರು ಮೃತಪಟ್ಟಿದ್ದು, 800 ಜನರು ಬಾಧಿತರಾಗಿದ್ದಾರೆ. ವೈರಸ್‌ ನಿಯಂತ್ರಿಸಲು 10 ದಿನಗಳಲ್ಲಿ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ.

ಗಣರಾಜ್ಯೋತ್ಸವ ರದ್ದು
ಬೀಜಿಂಗ್‌ (ಪಿಟಿಐ): ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ರದ್ದುಪಡಿಸಿದೆ.

ಭಾರತದಲ್ಲಿ 13 ಮಂದಿ ಮೇಲೆ ನಿಗಾ
ಮುಂಬೈ/ನವದೆಹಲಿ/ ತಿರುವನಂತಪುರ:
ಚೀನಾದಿಂದ ಬಂದಿರುವ 13ಕ್ಕೂ ಹೆಚ್ಚು ವ್ಯಕ್ತಿಗಳ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ. ಆದರೆ, ಇದುವರೆಗೆ ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇವರಲ್ಲಿ ಇಬ್ಬರನ್ನು ಮುಂಬೈ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಹೈದರಾಬಾದ್‌ ಆಸ್ಪತ್ರೆಯಲ್ಲಿ ದಾಖಲಿಸಿ ನಿಗಾವಹಿಸಲಾಗಿದೆ.

ಕೇರಳದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಮೇಲೆ ನಿಗಾವಹಿಸಲಾಗಿದೆ. ಎರ್ನಾಕುಲಂ, ಕೊಟ್ಟಾಯಂ ಮತ್ತು ತ್ರಿಶೂರ್‌ನಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲರೂ ಕಳೆದ ಕೆಲವು ದಿನಗಳ ಹಿಂದೆ ಚೀನಾದಿಂದ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಸೌದಿ ಅರೇಬಿಯಾದಲ್ಲಿ ಕೊಟ್ಟಾಯಂ ನರ್ಸ್‌ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಇವರು ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿಲ್ಲ. ಬದಲಿಗೆ ಎಂಇಆರ್‌ಎಸ್‌–ಸಿಒವಿ ಎನ್ನುವ ವೈರಸ್‌ಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜತೆಗೆ, ವುಹಾನ್‌ನಿಂದ ಇತ್ತೀಚೆಗೆ ಭಾರತಕ್ಕೆ ಹಿಂತಿರುಗಿರುವ 25 ವಿದ್ಯಾರ್ಥಿಗಳ ಆರೋಗ್ಯದ ಮೇಲೆಯೂ ನಿಗಾವಹಿಸಲಾಗಿದೆ. ಈ ಬಗ್ಗೆ ಚೀನಾದಲ್ಲಿ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿತ್ತು.

ಪ್ರವಾಸೋದ್ಯಮದ ಮೇಲೆ ಪರಿಣಾಮ
ಲಂಡನ್‌: ಕೊರೊನಾ ವೈರಸ್‌ ಸೋಂಕು ವಿವಿಧ ದೇಶಗಳಿಗೆ ಹಬ್ಬುತ್ತಿರುವುದರಿಂದ ಜಾಗತಿಕ ಪ್ರವಾಸೋದ್ಯಮ ಕ್ಷೇತ್ರದ ಮೇಲೆಯೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಸಂಚಾರ ವ್ಯವಸ್ಥೆಯ ಮೇಲೆ ನಿರ್ಬಂಧ ಹೇರುತ್ತಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರದ ಮೇಲೆಯೇ ಪರಿಣಾಮ ಬೀರುತ್ತಿದೆ ಎಂದು ವಿಶ್ವ ಪ್ರವಾಸೋದ್ಯಮ ಮಂಡಳಿಯ ಮುಖ್ಯಸ್ಥ ಗ್ಲೊರಿಯಾ ಗ್ಯುವರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.