ADVERTISEMENT

ಗಡಿ ಸಂಘರ್ಷ: ಉದ್ಧಟತನ ತೋರಿದ ಚೀನಾ ಕಡೆಯಲ್ಲಿ‌ 43 ಸಾವು-ನೋವು

ಏಜೆನ್ಸೀಸ್
Published 17 ಜೂನ್ 2020, 5:20 IST
Last Updated 17 ಜೂನ್ 2020, 5:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದ ಭಾರತ–ಚೀನಾ ವಾಸ್ತವ ಗಡಿ ರೇಖೆಯಲ್ಲಿ (ಎಲ್‌ಎಸಿ) 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯೊಂದಿಗೆ ಸೋಮವಾರ ರಾತ್ರಿ ನಡೆಸಿದ ಹಿಂಸಾತ್ಮಕ ಸಂಘರ್ಷದಲ್ಲಿ ಚೀನಾದ 43 ಸೈನಿಕರ ಸಾವು-ನೋವಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಗಾಲ್ವನ್ ಕಣಿವೆಯಲ್ಲಿ ಮುಖಾಮುಖಿಯಾದ ವೇಳೆ ಮೃತಪಟ್ಟವರು ಮತ್ತು ಗಂಭೀರವಾಗಿ ಗಾಯಗೊಂಡವರು ಸೇರಿದಂತೆ ಚೀನಾದ 43 ಮಂದಿ ಸಾವು ನೋವುಗಳನ್ನು ಅನುಭವಿಸಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ಖಚಿತಪಡಿಸಿದೆ.

ಎರಡೂ ಸೇನೆಗಳ ಮುಖಾಮುಖಿ ಸಮಯದಲ್ಲಿ ಸಾವು ನೋವುಗಳಿಗೆ ತುತ್ತಾದ ತಮ್ಮ ಸೈನಿಕರನ್ನು ಏರ್‌ಲಿಫ್ಟ್ ಮಾಡುವ ವೇಳೆ ಎಲ್‌ಎಸಿಯ ಚೀನಾದ ಕಡೆಯಿಂದ ಚಾಪರ್ ಚಟುವಟಿಕೆಯ ಹೆಚ್ಚಳ ಕಂಡುಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ.

ADVERTISEMENT

ಆರಂಭದಲ್ಲಿ ಭಾರತ ಸೇನೆಯ ಕರ್ನಲ್‌ ಬಿ. ಸಂತೋಷ್‌ ಬಾಬು, ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಹುತಾತ್ಮರಾಗಿದ್ದಾರೆ ಎಂದಷ್ಟೇ ಹೇಳಲಾಗಿತ್ತು. ಆದರೆ, ಸಂಘರ್ಷದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದು ಗಂಭೀರವಾಗಿ ಗಾಯಗೊಂಡಿದ್ದ ಇನ್ನೂ 17 ಯೋಧರು ಮೃತಪಟ್ಟಿದ್ದಾರೆ ಎಂದು ಮಂಗಳವಾರ ರಾತ್ರಿ ತಿಳಿಸಿದೆ. ಗಾಯಗೊಂಡ ಯೋಧರು ಅತಿ ಎತ್ತರದ ಪ್ರದೇಶದಲ್ಲಿ ಶೂನ್ಯ ತಾಪಮಾನಕ್ಕೆ ಒಡ್ಡಿಕೊಂಡಿದ್ದರಿಂದಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಮೂಲಕ ಸಂಘರ್ಷದಲ್ಲಿ ಭಾರತೀಯ ಸೇನೆಯ 20 ಮಂದಿ ಯೋಧರು ಹುತಾತ್ಮರಾಗಿರುವುದಾಗಿ ಸೇನೆ ತಿಳಿಸಿದೆ.

ಹಿಂಸಾತ್ಮಕ ಮುಖಾಮುಖಿ ಘರ್ಷಣೆಯಲ್ಲಿ ಎರಡೂ ಕಡೆಯವರೂ ಸಾವುನೋವುಗಳನ್ನು ಅನುಭವಿಸಿದ್ದಾರೆ ಮತ್ತು ಗಾಲ್ವನ್ ಕಣಿವೆಯಲ್ಲಿನ ವಾಸ್ತವ ಗಡಿ ರೇಖೆಯನ್ನು (ಎಲ್‌ಎಸಿ) ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಗೌರವಿಸಲು ಒಮ್ಮತದಿಂದ ಚೀನಾದ ಕಡೆಯವರು ನಿರ್ಗಮಿಸಿದ್ದಾರೆ ಮತ್ತು ಭಾರತದ ಯೋಧರು ಹಿಂದೆ ಸರಿದಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.