ADVERTISEMENT

ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದ ನಿತ್ಯದ ಅಂಕಿಅಂಶ ಪ್ರಕಟಣೆ ನಿಲ್ಲಿಸಿದ ಚೀನಾ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 5:58 IST
Last Updated 27 ಡಿಸೆಂಬರ್ 2022, 5:58 IST
   

ಬೀಜಿಂಗ್: ದೇಶದಲ್ಲಿ ವರದಿಯಾಗುವ ಕೋವಿಡ್‌ ಸೋಂಕಿನ ಹೊಸ ಪ್ರಕರಣಗಳು ಮತ್ತು ಕೋವಿಡ್‌ ಸಂಬಂಧಿತ ಸಾವುಗಳ ದೈನಂದಿನ ಮಾಹಿತಿಯನ್ನು ಪ್ರಕಟಿಸುವುದಿಲ್ಲ ಎಂದು ಚೀನಾದರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ)ಭಾನುವಾರ ತಿಳಿಸಿದೆ.

ತನ್ನನೀತಿ ಬದಲಿಸಿರುವುದಕ್ಕೆ ಯಾವುದೇ ವಿವರಣೆ ನೀಡದಿರುವ ಎನ್‌ಎಚ್‌ಸಿ, ‘2020ರ ಆರಂಭದಲ್ಲಿ ಆರಂಭಿಸಿದ ಈ ಕ್ರಮವನ್ನು ಕೈಬಿಡಲಾಗಿದೆ.ಇಂದಿನಿಂದ, ನಾವು ಇನ್ನು ಮುಂದೆ ಕೋವಿಡ್‌ ಪಿಡುಗಿನ ಬಗ್ಗೆ ದೈನಂದಿನ ಮಾಹಿತಿ ಪ್ರಕಟಿಸುವುದಿಲ್ಲ’ ಎಂದು ಹೇಳಿದೆ.

ತನ್ನ ಶೂನ್ಯ ಕೋವಿಡ್ ನೀತಿ ಸಡಿಸಿಲಿಸಿದ ಬೆನ್ನಲ್ಲೇ ದೇಶದಾದ್ಯಂತ ನಗರಗಳಲ್ಲಿ ಕೋವಿಡ್‌ ಹೊಸ ಪ್ರಕರಣಗಳು ಕ್ಷಿಪ್ರ ಏರಿಕೆಯಾಗಿವೆ. ಇದರ ಪರಿಣಾಮ ಬೀಜಿಂಗ್‌, ಶಾಂಘೈ, ಝೆಜಿಯಾಂಗ್‌, ಕಿಂಗ್ಡಾವೊ ಸೇರಿ ಹಲವು ನಗರಗಳಲ್ಲಿ ಸೋಂಕಿತರಿಂದ ಆಸ್ಪತ್ರೆಗಳು ಭರ್ತಿಯಾಗಿವೆ. ಔಷಧಾಲಯಗಳಲ್ಲಿ ಔಷಧಿಗಳು ಮುಗಿದು ಹೋಗಿವೆ. ಸಾವಿನ ಸಂಖ್ಯೆಯೂ ಏರುತಿದ್ದು, ಸ್ಮಶಾನಗಳು ಭರ್ತಿಯಾಗುತ್ತಿವೆ. ಚಿತಾಗಾರಗಳಲ್ಲಿ ಶವ ಸಂಸ್ಕಾರ ಬಿಡುವಿಲ್ಲದೆ ನಡೆಯುತ್ತಿದೆ.

ADVERTISEMENT

ಬಹುತೇಕ ನಗರಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಷಿ ಜಿನ್‌ಪಿಂಗ್‌ ಸರ್ಕಾರ ಹರಸಾಹಸಪಡುತ್ತಿದೆ. ಸೋಂಕು ಪತ್ತೆಗೆ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸುತ್ತಿದ್ದರೂ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಾಗದಂತಾಗಿದೆ.

‘ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು (ಸಿಡಿಸಿ) ಈ ಮಾಹಿತಿಯನ್ನುಸಂಶೋಧನೆ ಮತ್ತು ಮಾಹಿತಿ ಪರಿಶೀಲನೆ ಉದ್ದೇಶಕ್ಕಾಗಿ ಪ್ರಕಟಿಸಲಿದೆ’ ಎಂದು ಹೇಳಿರುವ ಎನ್‌ಎಚ್‌ಸಿ, ಸಿಡಿಸಿ ಈ ಮಾಹಿತಿಯನ್ನು ಯಾವ ವಿಧದಲ್ಲಿ ಮತ್ತು ಯಾರಿಗೆಲ್ಲ ತಲುಪುವಂತೆಪ್ರಕಟಿಸಲಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.

ಶೂನ್ಯ ಕೋವಿಡ್‌ ಕಠಿಣ ನಿರ್ಬಂಧ ತೆರವುಗೊಳಿಸಿದ ನಂತರ ದೇಶದಲ್ಲಿ ಈವರೆಗೆ ಆರು ಜನರು ಮಾತ್ರ ಸೋಂಕಿನಿಂದ ಮೃತಪಟ್ಟಿದ್ದಾರೆಂದು ಸರ್ಕಾರ ಅಧಿಕೃತವಾಗಿ ಹೇಳಿಕೊಂಡಿದೆ. ಆದರೆ, ಕಳೆದ ಶುಕ್ರವಾರಕಿಂಗ್ಡಾವೊದ ಹಿರಿಯ ಆರೋಗ್ಯ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ಚೀನಾದ ಕೇವಲ ಒಂದು ನಗರದಲ್ಲಿ ನಿತ್ಯ 5 ಲಕ್ಷ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ.

‘ಅಧಿಕೃತ ಅಂಕಿಅಂಶಗಳು ಮತ್ತು ವಾಸ್ತವದಲ್ಲಿನ ಸೋಂಕಿತ ಪ್ರಕರಣಗಳ ನಡುವೆ ಭಾರಿ ವ್ಯತ್ಯಾಸವಿರುವುದನ್ನು ಕೊನೆಗೂ ಸರ್ಕಾರ ಒಪ್ಪಿದಂತಾಗಿದೆ. ಇನ್ನು ಮುಂದೆ ಜನರನ್ನು ಮೂರ್ಖರನ್ನಾಗಿಸಲು ಆಗುವುದಿಲ್ಲವೆನ್ನುವುದೂ ಅರಿವಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.