ADVERTISEMENT

ಚೀನಾದಲ್ಲಿ ಕೊರೊನಾ ವೈರಸ್‌| ಪ್ರಾಣಿಗಳ ಮಾರಾಟ, ಸಂಚಾರಕ್ಕೆ ನಿರ್ಬಂಧ

ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ವೈರಸ್‌ l ನಿಯಂತ್ರಣಕ್ಕೆ ಚೀನಾ ಹರಸಾಹಸ l ಭಾರತೀಯರ ಮೇಲೆ ನಿಗಾ

ಏಜೆನ್ಸೀಸ್
Published 26 ಜನವರಿ 2020, 19:47 IST
Last Updated 26 ಜನವರಿ 2020, 19:47 IST
ಕೊರೊನಾ ವೈರಸ್‌ ಭೀತಿಯಿಂದಾಗಿ ಹಾಂಗ್‌ಕಾಂಗ್‌ನಲ್ಲಿನ ಡಿಸ್ನಿಲ್ಯಾಂಡ್‌ ಅನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚಲಾಗಿದೆ  ಎಎಫ್‌ಪಿ ಚಿತ್ರ
ಕೊರೊನಾ ವೈರಸ್‌ ಭೀತಿಯಿಂದಾಗಿ ಹಾಂಗ್‌ಕಾಂಗ್‌ನಲ್ಲಿನ ಡಿಸ್ನಿಲ್ಯಾಂಡ್‌ ಅನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚಲಾಗಿದೆ  ಎಎಫ್‌ಪಿ ಚಿತ್ರ   

ಬೀಜಿಂಗ್‌,ನವದೆಹಲಿ: ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ವನ್ಯ ಜೀವಿಗಳ ವ್ಯಾಪಾರದ ಮೇಲೆ ಚೀನಾ ತಾತ್ಕಾಲಿಕವಾಗಿ ನಿಷೇಧ ಹೇರಿದೆ.

ಸಾಂಕ್ರಾಮಿಕ ರೋಗ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಯಾವುದೇ ವನ್ಯ ಜೀವಿಗಳನ್ನು ಸಾಗಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಚೀನಾದ ಕೃಷಿ ಸಚಿವಾಲಯ ತಿಳಿಸಿದೆ.ವುಹಾನ್‌ ನಗರದಲ್ಲಿ ಮೊದಲು ಈ ವೈರಸ್‌ ಕಾಣಿಸಿಕೊಂಡಿತ್ತು. ಈ ನಗರದಲ್ಲಿಯೇ ವಿವಿಧ ವನ್ಯಜೀವಿಗಳ ಮಾರಾಟ ನಡೆದಿತ್ತು. ವನ್ಯ ಜೀವಿಗಳ ವ್ಯಾಪಾರ ವಹಿವಾಟು ಸಾರ್ವಜನಿಕರ ಆರೋಗ್ಯದ ಮೇಲೆ ಅಪಾಯ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

2002–03ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್‌ ವೈರಸ್‌ ಸಹ ವನ್ಯಜೀವಿಗಳ ಮೂಲಕವೇ ಹರಡಿತ್ತು. ಬಾವುಲಿಗಳಲ್ಲೇ ಈ ವೈರಸ್‌ ಮೊದಲು ಪತ್ತೆಯಾಗಿತ್ತು.

ADVERTISEMENT

ಪ್ರಾಣಿಗಳಲ್ಲಿ ಇನ್ನೂ ಸುಮಾರು 17 ಲಕ್ಷ ಪತ್ತೆಯಾಗದ ವೈರಸ್‌ಗಳಿವೆ. ಇವುಗಳಲ್ಲಿ ಅರ್ಧದಷ್ಟು ವೈರಸ್‌ಗಳು ಮನುಷ್ಯನಿಗೆ ಅಪಾಯಕಾರಿವೆ ಎಂದು ಸಾಂಕ್ರಾಮಿಕ ರೋಗಗಳ ಕುರಿತು ಅಧ್ಯಯನ ನಡೆಸುತ್ತಿರುವ ‘ಗ್ಲೊಬಲ್‌ ವಿರೋಮ್‌’ ಸಂಸ್ಥೆಯ ಅಧ್ಯಯನ ತಿಳಿಸಿದೆ.

ಸಂಚಾರಕ್ಕೆ ನಿರ್ಬಂಧ: ಕೊರೊನಾ ವೈರಸ್‌ ನಿಯಂತ್ರಿಸಲು ಚೀನಾ ಭಾನುವಾರ ಸಾರಿಗೆ ಸಂಚಾರಕ್ಕೆ ಹೇರಿರುವ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಹುಬೈ ಪ್ರಾಂತ್ಯದಲ್ಲಿ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇದರಿಂದ, ಲಕ್ಷಾಂತರ ಮಂದಿಯ ಜನಜೀವನದ ಮೇಲೆ ಪರಿಣಾಮ ಬೀರಿದೆ.ಬೀಜಿಂಗ್‌, ಶಾಂಘೈ ಮತ್ತು ಶ್ಯಾನ್‌ಡಾಂಗ್‌ ಪ್ರಾಂತ್ಯಗಳಿಗೆ ಅತಿ ದೂರದ ನಗರಗಳಿಂದ ಬರುವ ಬಸ್‌ಗಳ ಪ್ರವೇಶ ಮತ್ತು ತೆರಳುವುದನ್ನು ನಿಷೇಧಿಸಲಾಗಿದೆ.

‘ಆರೋಗ್ಯದ ಮೇಲೆ ನಿಗಾ’: ‘ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ನಿರಂತರವಾಗಿ ಚೀನಾದಲ್ಲಿರುವ ಭಾರತೀಯರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.

‘ಭಾರತೀಯರ ಅನುಕೂಲಕ್ಕಾಗಿ ಎರಡು ಸಹಾಯವಾಣಿಗಳನ್ನು (+8618612083629 ಮತ್ತು +8618612083617) ರಾಯಭಾರ ಕಚೇರಿ ಆರಂಭಿಸಿದೆ’ ಎಂದಿದ್ದಾರೆ.ಬೀಜಿಂಗ್‌ನಲ್ಲಿರುವ ಭಾರತದ ರಾಯ
ಭಾರ ಕಚೇರಿಯೂ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದು, ‘ಹುಬೈ ಪ್ರಾಂತ್ಯದಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರ ಆರೋಗ್ಯದ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದೆ.

ಕೈಗಾರಿಕೆಗಳ ನಗರ ವುಹಾನ್‌

ವುಹಾನ್‌(ಎಎಫ್‌ಪಿ): ಕೊರೊನಾ ವೈರಸ್‌ ಮೊದಲು ಕಾಣಿಸಿಕೊಂಡು ಅಪಖ್ಯಾತಿಗೆ ಗುರಿಯಾಗಿರುವ ಚೀನಾದ ವುಹಾನ್‌ ನಗರ ಬೃಹತ್‌ ಕೈಗಾರಿಕೆಗಳಿಗೂ ಖ್ಯಾತಿ ಪಡೆದಿದೆ.

ಉಕ್ಕು ಮತ್ತು ಕಬ್ಬಿಣ ತಯಾರಿಕೆ ಸೇರಿದಂತೆ ಹಲವು ಕೈಗಾರಿಕೆಳು ಈ ನಗರದಲ್ಲಿವೆ. ಹೀಗಾಗಿ, ಅಪಾರ ಸಂಖ್ಯೆಯಲ್ಲಿ ವಲಸೆಗಾರರು ಇಲ್ಲಿದ್ದಾರೆ. 1.1 ಕೋಟಿ ಜನಸಂಖ್ಯೆಯಲ್ಲಿ 50 ಲಕ್ಷ ವಲಸಿಗರಿದ್ದಾರೆ.

ಯುನೆಸ್ಕೊ ವರದಿ ಪ್ರಕಾರ, ವಿಶ್ವದ ಅತಿ ಉದ್ದದ ಸೇತುವೆಗಳು ಮತ್ತು ಚೀನಾದ ಹೈಸ್ಪೀಡ್‌ ರೈಲ್ವೆಗಳ ವಿನ್ಯಾಸವನ್ನು ವುಹಾನ್‌ ನಗರದ ವಿನ್ಯಾಸಕಾರರು ರೂಪಿಸಿದ್ದಾರೆ.

ಅಮೆರಿಕ, ಫ್ರಾನ್ಸ್‌ ಸೇರಿದಂತೆ ಹಲವು ದೇಶಗಳ ಕನ್ಸಲೇಟ್‌ ಕಚೇರಿಗಳು ಸಹ ಇಲ್ಲಿವೆ. ಆಟೊ ಮತ್ತು ಎಲೆಕ್ಟ್ರಾನಿಕ್ಸ್‌ ಉದ್ಯಮಗಳು ಸೇರಿದಂತೆ ಜಪಾನ್‌ನ 160 ಕಂಪನಿಗಳು ಇಲ್ಲಿವೆ.

ಸಾವಿನ ಸಂಖ್ಯೆ 56ಕ್ಕೆ ಏರಿಕೆ

ಕೊರೊನಾ ವೈರಸ್‌ನಿಂದಾಗಿ ಇದುವರೆಗೆ ಸಾವಿಗೀಡಾದವರ ಸಂಖ್ಯೆ 56ಕ್ಕೆ ಏರಿದ್ದು, 2,000 ಮಂದಿ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಸೋಂಕಿಗೆ ಒಳಗಾದ 324 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಜತೆಗೆ, ಇನ್ನೂ 2,684 ಮಂದಿ ಸೋಂಕಿಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ. ಹುಬೈ ಪ್ರಾಂತ್ಯದ ವುಹಾನ್‌ ಮತ್ತು ಇತರ 17 ನಗರಗಳಲ್ಲೇ ಅತಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಈ ಪ್ರಾಂತ್ಯದಲ್ಲೇ ಇದುವರೆಗೆ 1,052 ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾಗಿದ್ದು, 13 ಮಂದಿ ಸಾವಿಗೀಡಾಗಿದ್ದಾರೆ. ‘ಚೀನಾ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ಈಗ ಎದುರಾಗಿರುವ ಸಂಕಷ್ಟವನ್ನು ಶೀಘ್ರ ನಿವಾರಿಸುತ್ತೇ’ವೆ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದಾರೆ.

12ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ವೈರಸ್‌ ಹಬ್ಬಿದೆ. ಚೀನಾದಲ್ಲಿರುವ ತನ್ನ ನಾಗರಿಕರನ್ನು ವಾಪಸ್ ಕರೆಸಿಕೊಳ್ಳಲು ವುಹಾನ್‌ ನಗರದಿಂದ ಸ್ಯಾನ್‌ಫ್ರಾನ್ಸಿಸ್ಕೊ ನಗರಕ್ಕೆ ಮಂಗಳವಾರ ವಿಶೇಷ ವಿಮಾನದ ವ್ಯವಸ್ಥೆ ಮಾಡುವುದಾಗಿ ಅಮೆರಿಕ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.