ADVERTISEMENT

Japan PM's comments | ಪರಿಣಾಮ ಎದುರಿಸಬೇಕಾಗುತ್ತದೆ: ಜಪಾನ್‌ಗೆ ಚೀನಾ ಎಚ್ಚರಿಕೆ

ಪಿಟಿಐ
Published 19 ನವೆಂಬರ್ 2025, 15:20 IST
Last Updated 19 ನವೆಂಬರ್ 2025, 15:20 IST
<div class="paragraphs"><p>ಸನೇ&nbsp;ತಕೈಚಿ</p></div>

ಸನೇ ತಕೈಚಿ

   

ಬೀಜಿಂಗ್‌/ಟೊಕಿಯೊ: ‘ಜಪಾನ್‌ ಪ್ರಧಾನಿ ಸನೇ ತಕೈಚಿ ಅವರು ಚೀನಾದ ಬಗ್ಗೆ ನೀಡಿರುವ ತಪ್ಪಾದ ಹೇಳಿಕೆಗೆ ಸ್ಪಷ್ಟನೆ ನೀಡಬೇಕು. ಈ ವಿಚಾರದಲ್ಲಿ ಅವರು  ಪ್ರತಿಕ್ರಿಯಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಚೀನಾ ಬುಧವಾರ ಎಚ್ಚರಿಕೆ ನೀಡಿದೆ.  

‘ತೈವಾನ್‌ ತನ್ನ ಭೂಪ್ರದೇಶ ಎಂದು ಹೇಳಿಕೊಂಡು ಚೀನಾ  ಅದರ ಮೇಲೆ ದಾಳಿ ನಡೆಸಿದರೆ, ಆಗ ಜಪಾನ್‌ ಮಿಲಿಟರಿ ಹಸ್ತಕ್ಷೇಪಕ್ಕೆ ಮುಂದಾಗಬಹುದು’ ಎಂದು ತಕೈಚಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ADVERTISEMENT

ಈ ಹೇಳಿಕೆಯು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ನ.18ರಂದು ಬೀಜಿಂಗ್‌ನಲ್ಲಿರುವ ಜಪಾನ್‌ನ ರಾಯಭಾರಿ ಎದುರು ಆಕ್ಷೇಪ ದಾಖಲಿಸಿದ್ದ ಚೀನಾ, ‘ತಕೈಚಿ ತಕ್ಷಣವೇ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆಯಬೇಕು’ ಎಂದು ಒತ್ತಾಯಿಸಿತ್ತು. 

‘ಜಪಾನ್‌ ಪ್ರಧಾನಿ, ಚೀನಾದ ಆಂತರಿಕ ವಿಷಯದಲ್ಲಿ ತಲೆಹಾಕುವ ಮೂಲಕ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ್ದು, ಚೀನಿಯರನ್ನು ಕೆರಳಿಸಿದ್ದಾರೆ’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಮವೊ ನಿಂಗ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ತಕೈಚಿ ತಮ್ಮ ತಪ್ಪಾದ ಹೇಳಿಕೆಗೆ ಸ್ಪಷ್ಟನೆ ನೀಡುವ ಮೂಲಕ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅವರು ಇದಕ್ಕೆ ಸಿದ್ಧರಿಲ್ಲದಿದ್ದರೆ ಚೀನಾಕ್ಕೆ ಬೇರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದೂ ಅವರು ಹೇಳಿದ್ದಾರೆ. 

‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯಲು ಜಪಾನ್‌ ಸಂಪೂರ್ಣ ಅನರ್ಹವಾಗಿದೆ’ ಎಂದು ಮವೊ ನಿಂಗ್‌  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.