ADVERTISEMENT

ಚೀನಾ ಜನಸಂಖ್ಯೆ: ಎರಡನೇ ವರ್ಷವೂ ಇಳಿಕೆ–ಎನ್‌ಬಿಎಸ್

20.80 ಲಕ್ಷದಷ್ಟು ಕುಸಿತ * ಅಂಕಿ ಅಂಶ ಬಿಡುಗಡೆ ಮಾಡಿದ ಎನ್‌ಬಿಎಸ್

ಪಿಟಿಐ
Published 17 ಜನವರಿ 2024, 14:24 IST
Last Updated 17 ಜನವರಿ 2024, 14:24 IST
.
.   

ಬೀಜಿಂಗ್‌: ಚೀನಾದ ಜನಸಂಖ್ಯೆಯು ಸತತ ಎರಡನೇ ವರ್ಷವೂ ಇಳಿಕೆ ದಾಖಲಿಸಿದೆ. 2023ರಲ್ಲಿ ಚೀನಾದ ಜನಸಂಖ್ಯೆ 140.9 ಕೋಟಿಯಷ್ಟಾಗಿದ್ದು, ಹಿಂದಿನ ವರ್ಷಕ್ಕಿಂತ 20.80 ಲಕ್ಷದಷ್ಟು ಇಳಿಕೆಯಾಗಿದೆ ಎಂದು ಚೀನಾದ ರಾಷ್ಟ್ರೀಯ ಅಂಕಿ ಅಂಶಗಳ ಬ್ಯೂರೊ (ಎನ್‌ಬಿಎಸ್) ಬುಧವಾರ ಪ್ರಕಟಿಸಿದೆ.

ಚೀನಾದಲ್ಲಿ ಜನಸಂಖ್ಯೆಯು ಆರು ದಶಕಗಳಲ್ಲಿ 2022ರಲ್ಲಿ ‌‌ಮೊದಲ ಬಾರಿಗೆ ಕುಸಿತ ಕಂಡಿತ್ತು. 

ವಿಶ್ವಸಂಸ್ಥೆಯ ಜನಸಂಖ್ಯಾ ಅಂಕಿ ಅಂಶಗಳ ಪ್ರಕಾರ, ಭಾರತವು ಕಳೆದ ವರ್ಷ ಚೀನಾವನ್ನು ಹಿಂದಿಕ್ಕಿ 142.86 ಕೋಟಿ ಜನರೊಂದಿಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎನಿಸಿಕೊಂಡಿದೆ.

ADVERTISEMENT

ಕಳೆದ ವರ್ಷ 90.2 ಲಕ್ಷ ಶಿಶುಗಳು ಚೀನಾದಲ್ಲಿ ಜನಿಸಿದ್ದರೆ, 2022ರಲ್ಲಿ 95.6 ಲಕ್ಷ ಶಿಶುಗಳ ಜನಿಸಿದ್ದವು. ಅಂದರೆ ಜನನ ಪ್ರಮಾಣ ಶೇ 5.6ರಷ್ಟು ಕಡಿಮೆಯಾಗಿದೆ. 1949ರಿಂದೀಚೆಗೆ ಇದೇ ಮೊದಲ ಬಾರಿಗೆ ಜನನ ಪ್ರಮಾಣ ದೊಡ್ಡ ಪ್ರಮಾಣದಲ್ಲಿ ಇಳಿಕೆ ದಾಖಲಾಗಿದೆ. 2022ರಲ್ಲಿ ಸಾವಿರಕ್ಕೆ 6.77ರಷ್ಟಿದ್ದ ಜನನ ಪ್ರಮಾಣವು, 2023ರಲ್ಲಿ 6.39ಕ್ಕೆ ಕುಸಿದಿದೆ ಎಂಬುದು ಎನ್‌ಬಿಎಸ್‌ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷವು ಜನಸಂಖ್ಯೆ ನಿಯಂತ್ರಿಸಲು ಕೆಲ ವರ್ಷಗಳವರೆಗೆ ಜಾರಿಗೊಳಿಸಿದ್ದ ಒಂದು ಮಗು ನೀತಿಯ ಪರಿಣಾಮದಿಂದಾಗಿ ಈ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

2016ರಿಂದಲೂ ಚೀನಾದ ಜನಸಂಖ್ಯಾ ಬೆಳವಣಿಗೆ ಪ್ರಮಾಣ ಮಂದಗತಿಯಲ್ಲಿ ಸಾಗಿದೆ. ದುಬಾರಿಯಾಗುತ್ತಿರುವ ಜೀವನ ನಿರ್ವಹಣೆ, ಜೀವನಶೈಲಿಯಲ್ಲಿ ಬದಲಾವಣೆ, ಮಕ್ಕಳನ್ನು ಬೆಳೆಸಲು ತಗಲುತ್ತಿರುವ ವೆಚ್ಚದಲ್ಲಿನ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಚೀನಾದ ಜನರು ಹೆಚ್ಚಿನ ಮಕ್ಕಳನ್ನು ಹೊಂದಲು ನಿರಾಸಕ್ತಿ ತಾಳುತ್ತಿರುವುದು ಜನಸಂಖ್ಯೆ ಕುಗ್ಗಲು ಪ್ರಮುಖ ಕಾರಣ ಎಂದು ಅವರು ಹೇಳುತ್ತಾರೆ.

ಜನಸಂಖ್ಯೆಯ ಇಳಿಕೆ ಪ್ರಮಾಣವನ್ನು ಗುರುತಿಸಿದ್ದ ಚೀನಾವು 2021ರಲ್ಲಿ ಜನಸಂಖ್ಯೆ ನಿಯಂತ್ರಣ ನೀತಿಯಲ್ಲಿ ಕೆಲ ಸುಧಾರಣೆಗಳನ್ನು ತಂದಿತು. ಮೂರು ಮಕ್ಕಳನ್ನು ಹೊಂದಲು ಅವಕಾಶವನ್ನು ಕಲ್ಪಿಸುವ ನೀತಿಯನ್ನೂ ಅದು ಜಾರಿಗೊಳಿಸಿತು. ದೇಶದ ಹಲವು ನಗರ, ಪ್ರಾಂತ್ಯ ಮತ್ತು ಪ್ರದೇಶಗಳಲ್ಲಿ ಎರಡು ಅಥವಾ ಮೂರನೇ ಮಗುವನ್ನು ಹೊಂದುವ ಕುಟುಂಬಗಳಿಗೆ ವಿವಿಧ ರೀತಿಯ ಸಬ್ಸಿಡಿಗಳನ್ನು ಒದಗಿಸುವಂತಹ ಪ್ರೋತ್ಸಾಹದಾಯಕ ನೀತಿಗಳನ್ನು ಘೋಷಿಸಿತ್ತು.

2020 ಮತ್ತು 2022ರಲ್ಲಿ ಜಾರಿಯಲ್ಲಿದ್ದ ಕೋವಿಡ್‌ ಶೂನ್ಯ ನೀತಿಯೂ ಜನಸಂಖ್ಯೆ ಇಳಿಕೆ ಮತ್ತೊಂದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಚೀನಾದಲ್ಲಿ ಕಳೆದ ವರ್ಷ 1.1 ಕೋಟಿ ಜನರು ಮೃತಪಟ್ಟಿದ್ದು, ರಾಷ್ಟ್ರೀಯ ಮರಣ ಪ್ರಮಾಣ ಪ್ರತಿ ಸಾವಿರಕ್ಕೆ 7.87ರಷ್ಟಾಗಿದೆ ಎಂದು ಹಾಂಗ್‌ಕಾಂಗ್‌ ಮೂಲದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ. 

‘ದೊಡ್ಡ ಪ್ರಮಾಣದ ಜನಸಂಖ್ಯೆಯಿಂದ ಚೀನಾ ಈ ಹಿಂದೆ ಸಾಕಷ್ಟು ಲಾಭಗಳನ್ನು ಪಡೆದಿದೆ. ಹಿರಿಯ ನಾಗರಿಕರ ಸಂಖ್ಯೆಯಲ್ಲಿ ಹೆಚ್ಚಳ, ದುಡಿಯುವ ವಯಸ್ಸಿನ ಜನರ ಸಂಖ್ಯೆಯಲ್ಲಿ ಇಳಿಕೆ, ಸಾಮಾಜಿಕ ಭದ್ರತಾ ವ್ಯವಸ್ಥೆ ಸೇರಿದಂತೆ ಹಲವು ಸವಾಲುಗಳನ್ನು ಚೀನಾದ ಆರ್ಥಿಕತೆ ಎದುರಿಸಬೇಕಾಗುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. 

ಮುಂದಿನ ವರ್ಷಗಳಲ್ಲಿ ಚೀನಾದ ಒಟ್ಟಾರೆ ಜನಸಂಖ್ಯೆಯ ಪ್ರಮಾಣವು ಇನ್ನಷ್ಟು ಕುಸಿತ ಕಾಣಲಿದೆ ಎಂದು ಫುಡಾನ್‌ ವಿಶ್ವವಿದ್ಯಾಲಯದ ಜನಸಂಖ್ಯೆ ಮತ್ತು ಅಭಿವೃದ್ಧಿ ನೀತಿ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪೆಂಗ್‌ ಕ್ಸಿಝೆ ಹೇಳಿದ್ದಾರೆ.

ಅಂಕಿ ಅಂಶಗಳು 140.9 ಕೋಟಿ 2023ರಲ್ಲಿ ಚೀನಾದ ಒಟ್ಟಾರೆ ಜನಸಂಖ್ಯೆ. 6.39 ಜನನ ಪ್ರಮಾಣ–  7.87 ಮರಣ ಪ್ರಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.