ADVERTISEMENT

ನೇಪಾಳದಲ್ಲಿ ರಾಜಕೀಯ ಅಸ್ಥಿರತೆ: ಚೀನಾ ತಂಡ ಭೇಟಿ

ಪಿಟಿಐ
Published 27 ಡಿಸೆಂಬರ್ 2020, 15:11 IST
Last Updated 27 ಡಿಸೆಂಬರ್ 2020, 15:11 IST
ಚೀನಾ ರಾಷ್ಟ್ರಧ್ವಜ
ಚೀನಾ ರಾಷ್ಟ್ರಧ್ವಜ   

ಕಠ್ಮಂಡು: ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ಮನೆ ಮಾಡಿರುವ ಕಾರಣ, ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಲು ನಾಲ್ವರು ಸದಸ್ಯರನ್ನೊಳಗೊಂಡ ಚೀನಾದ ಉನ್ನತ ಮಟ್ಟದ ನಿಯೋಗವೊಂದು ಭಾನುವಾರ ನೇಪಾಳಕ್ಕೆ ಭೇಟಿ ನೀಡಿದೆ.

ಚೀನಾ ಕಮ್ಯುನಿಸ್ಟ್‌ ಪಕ್ಷದ (ಸಿಪಿಸಿ) ಅಂತರರಾಷ್ಟ್ರೀಯ ವಿಭಾಗದ ಉಪಾಧ್ಯಕ್ಷ ಗುವೊ ಯೆಜೊವೊ ನೇತೃತ್ವದ ನಿಯೋಗವು ಕಠ್ಮಂಡುವಿನಲ್ಲಿ ಉಳಿದಿದ್ದು, ಅಲ್ಲಿನ ನಾಯಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲಿದೆ ಎಂದು ‘ಮೈ ರಿಪಬ್ಲಿಕ’ ದಿನಪತ್ರಿಕೆ ವರದಿ ಮಾಡಿದೆ.

‘ನೇಪಾಳದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯನ್ನು ಅರಿಯಲು, ತುರ್ತಾಗಿ ಸಂಸತ್ ವಿಸರ್ಜಿಸಿರುವ ಕುರಿತು ಹಾಗೂ ಅಲ್ಲಿನ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿರುವ ಕುರಿತು ನಿಯೋಗ ಅವಲೋಕನ ನಡೆಸಲಿದೆ. ಗುವೊ ಯೆಜೊವೊ ಅವರು ಅಲ್ಲಿನ ಎರಡು ಪ್ರಮುಖ ರಾಜಕೀಯ ಬಣಗಳ ನಡುವೆ ಸಭೆ ನಡೆಸಲಿದ್ದಾರೆ’ ಎಂದೂ ರಾಜತಾಂತ್ರಿಕ ಅಧಿಕಾರಿಗಳ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ಹೇಳಿದೆ.

ADVERTISEMENT

ನೇಪಾಳದ ಕಮ್ಯುನಿಸ್ಟ್ ಪಕ್ಷದಲ್ಲಿ ಪ್ರಭಾವ ಹೊಂದಿರುವ ಸಿಪಿಸಿ, ಅಲ್ಲಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಪರವಾಗಿದೆ. ಚೀನಾದ ರಾಯಭಾರಿ ‌ಯಾಂಕಿ ಹೂ ಅವರು ಈಗಾಗಲೇ ನೇಪಾಳದ ಅಧ್ಯಕ್ಷ ಭಂಡಾರಿ, ಎನ್‌ಸಿಪಿಯ ಹಿರಿಯ ಮುಖಂಡ ಪ್ರಚಂಡ, ಮಾಧವ್ ಕುಮಾರ್ ನೇಪಾಳ, ಮಾಜಿ ಸ್ಪೀಕರ್ ಕೃಷ್ಣ ಬಹಾದ್ದೂರ್ ಮಹರ ಮತ್ತು ಬಾರ್ಷಾ ಮನ್ ಪುನ್ ಅವರೊಂದಿಗೆ ಸಭೆ ನಡೆಸಿದ್ದಾರೆ.

‘ನೇಪಾಳದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ್ದೇವೆ. ನೇಪಾಳದ ನೆರೆಯ ರಾಷ್ಟ್ರವಾಗಿ ಭಾರತವು ತನ್ನ ಬೆಂಬಲವನ್ನು ಮುಂದುವರಿಸುತ್ತದೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಹೇಳಿದ್ದಾರೆ.

ನೇಪಾಳದ ಆಂತರಿಕ ವ್ಯವಹಾರಗಳಲ್ಲಿ ಚೀನಾ ಪ್ರವೇಶಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆ ಚೀನಾದ ರಾಯಭಾರಿ ನೇಪಾಳದ ರಾಜಕೀಯ ಮುಖಂಡರ ಜೊತೆ ನಡೆಸಿದ್ದ ಸರಣಿ ಸಭೆಗಳ ಕುರಿತು ಅಲ್ಲಿನ ಹಿರಿಯ ನಾಯಕರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಚೀನಾದ ಆಂತರಿಕ ಹಸ್ತಕ್ಷೇಪ ವಿರೋಧಿಸಿ ವಿದ್ಯಾರ್ಥಿ ನಾಯಕರು ಸೇರಿದಂತೆ ಹಲವರು ಚೀನಾದ ರಾಯಭಾರಿ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.