ADVERTISEMENT

ಭೂಮಿಯತ್ತ ಚೀನಾದ ರಾಕೆಟ್‌ನ ಅವಶೇಷ: ಅಪಾಯ ಸಂಭವಿಸುವ ಸಾಧ್ಯತೆ ಕಡಿಮೆ ಎಂದ ಚೀನಾ

ಏಜೆನ್ಸೀಸ್
Published 8 ಮೇ 2021, 9:02 IST
Last Updated 8 ಮೇ 2021, 9:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೀಜಿಂಗ್‌: ನಿಯಂತ್ರಣ ಕಳೆದುಕೊಂಡಿರುವ ಚೀನಾದ ಲಾಂಗ್‌ ಮಾರ್ಚ್‌–5ಬಿ ರಾಕೆಟ್‌ನ ದೊಡ್ಡ ಭಾಗವೊಂದು ಈ ವಾರಾಂತ್ಯದಲ್ಲಿ ಭೂಮಿಯ ವಾತಾವರಣವನ್ನು ಮರು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಹೇಳಿರುವ ಚೀನಾ, ಇದರಿಂದ ಭೂಮಿಯ ಮೇಲೆ ಹಾನಿ ಅಥವಾ ಅಪಾಯ ಸಂಭವಿಸುವುದು ಕಡಿಮೆ‘ ಎಂದು ಹೇಳಿದೆ.‌

ಲಾಂಗ್ ಮಾರ್ಚ್ -5 ಬಿ ರಾಕೆಟ್ ಚೀನಾದ ಹೊಸ ಬಾಹ್ಯಾಕಾಶ ನಿಲ್ದಾಣದಿಂದ ಮೊದಲ ಮಾಡ್ಯೂಲ್ ಅನ್ನು ಏಪ್ರಿಲ್ 29 ರಂದು ಭೂಮಿಯ ಕಕ್ಷೆಗೆ ಉಡಾಯಿಸಿತು. ಇದರ 18 ಟನ್ ತೂಕದ ಮುಖ್ಯ ಭಾಗವು ಈಗ ಭೂಮಿಯ ವಾತಾವರಣದಲ್ಲಿ ಬೀಳುವ ಹಂತದಲ್ಲಿದೆ (ಫ್ರೀಫಾಲ್‌ನಲ್ಲಿದೆ). ಆ ಅವಶೇಷ ಭೂಮಿಯ ಯಾವ ಭಾಗದಲ್ಲಿ, ಯಾವಾಗ ಬೀಳುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ ಎಂದು ತಜ್ಞರು ಹೇಳುತ್ತಿದ್ದಾರೆ.

ಅಮೆರಿಕದ ಪ್ರಕಾರ ಈ ರಾಕೆಟ್‌ ಅವಶೇಷದ ತುಂಡು ಶನಿವಾರ ಸುಮಾರು 2300 ಜಿಎಂಟಿ ಹೊತ್ತಿಗೆ ಭೂಮಿಯ ವಾತಾವರಣಕ್ಕೆ ಮರು ಪ್ರವೇಶವಾಗುವ ಸಾಧ್ಯತೆ ಇದೆ. ‘ಸಾಮಾನ್ಯವಾಗಿ ಭೂಮಿಯನ್ನು ಮರು ಪ್ರವೇಶಿಸುವ ಹೆಚ್ಚಿನ ರಾಕೆಟ್‌ ಭಾಗಗಳು ಭೂಮಿಗೆ ಅಪ್ಪಳಿಸುವ ಮನ್ನವೇ ನಾಶವಾಗಬಹುದು. ಇದರಿಂದ ಭೂಮಿ ಮೇಲ್ಬಾಗದಲ್ಲಿ ಹಾನಿಯುಂಟಾಗುವ ಸಂಭವನೀಯತೆ ಕಡಿಮೆ‘ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವನ್ಬಿನ್‌ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ರಾಕೆಟ್ ಅಥವಾ ಅದರ ಕೆಲವು ಭಾಗಗಳು ಬೀಳುವ ಸ್ಥಳದ ಬಗ್ಗೆ ಊಹಾಪೋಹಗಳು ಇದ್ದರೂ, ಭೂ ಗ್ರಹದಲ್ಲಿ ಶೇ 70ರಷ್ಟು ಭಾಗ ನೀರಿನಿಂದ ಕೂಡಿರುವುದರಿಂದ, ಸುಟ್ಟು ಹೋಗದಿರುವ ಯಾವುದೇ ಭಗ್ನಾವಶೇಷಗಳು ಸಾಮಾನ್ಯವಾಗಿ ಸಮುದ್ರಕ್ಕೆ ಬೀಳುವ ಸಾಧ್ಯತೆ ಇರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.