ADVERTISEMENT

ನ್ಯಾನ್ಸಿ ಪೆಲೊಸಿ ತೈವಾನ್ ಭೇಟಿ: ತೈವಾನ್ ಜಲಸಂಧಿ ಬಳಿ ಚೀನಾ ಯುದ್ಧವಿಮಾನಗಳ ಅಬ್ಬರ

ರಾಯಿಟರ್ಸ್
Published 2 ಆಗಸ್ಟ್ 2022, 14:21 IST
Last Updated 2 ಆಗಸ್ಟ್ 2022, 14:21 IST
   

ತೈಪೆ: ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೊಸಿ ಮಂಗಳವಾರ ತೈವಾನ್‌ನ ರಾಜಧಾನಿ ತೈಪೆಗೆ ಆಗಮಿಸುವ ಸಾಧ್ಯತೆ ಇದೆ. ಈ ನಡುವೆ, ನ್ಯಾನ್ಸಿ ಭೇಟಿಯನ್ನು ವಿರೋಧಿಸಿರುವ ನೆರೆಯ ಚೀನಾ ದೇಶದ ಯುದ್ಧ ವಿಮಾನಗಳು ತೈವಾನ್ ಜಲಸಂಧಿ ಬಳಿ ಹಾರಾಟ ನಡೆಸಿದ ಬಗ್ಗೆ ಮೂಲಗಳು ತಿಳಿಸಿವೆ.

ತಮ್ಮದೇ ಪ್ರದೇಶವೆಂದು ಪರಿಗಣಿಸುವ ತೈವಾನ್‌ಗೆ ಪೆಲೊಸಿ ಭೇಟಿ ಬಗ್ಗೆ ಚೀನಾ ವ್ಯಗ್ರವಾಗಿದೆ. ಈ ಮಧ್ಯೆ, ಚೀನಾದ ಮಿಲಿಟರಿ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.

ತೈವಾನ್ ಜಲಸಂಧಿ ಬಳಿಯ ಸಮುದ್ರದಲ್ಲಿ ಮಂಗಳವಾರ, ಚೀನಾದ ಹಲವು ಯುದ್ಧನೌಕೆಗಳ ಸಂಚಾರ ಮತ್ತು ಯುದ್ಧ ವಿಮಾನಗಳ ಹಾರಾಟ ಇದ್ದುದ್ದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಚೀನಾ ಮಿಲಿಟರಿಯ ಈ ಚಲನವಲನ ಅತ್ಯಂತ ಅಸಹಜವಾಗಿದ್ದು, ಅತ್ಯಂತ ಪ್ರಚೋದನಕಾರಿಯಾಗಿತ್ತು ಎಂದೂ ಅವರು ಹೇಳಿದ್ದಾರೆ.

ADVERTISEMENT

ಬೆಳಿಗ್ಗೆ ಜಲಸಂಧಿಯ ತೈವಾನ್ ಭಾಗಕ್ಕೆ ಬಂದು ಹೋಗಿ ಮಾಡುತ್ತಿದ್ದ ಚೀನಾ ಯುದ್ಧ ವಿಮಾನಗಳು ಆತಂಕ ಸೃಷ್ಟಿಸಿದ್ದವು. ಮಧ್ಯಾಹ್ನದ ಹೊತ್ತಿಗೆ ಯುದ್ಧ ವಿಮಾನಗಳು ವಾಪಸ್ ಆಗಿದ್ದು, ಯುದ್ಧ ನೌಕೆಗಳು ಅಲ್ಲಿಯೇ ಉಳಿದಿವೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ತೈವಾನ್ ಸಹ ಯುದ್ಧ ವಿಮಾನಗಳನ್ನು ಸನ್ನದ್ಧವಾಗಿರಿಸಿದೆ ಎಂದು ತಿಳಿದು ಬಂದಿದೆ.

ಯಾವುದೇ ಶತ್ರುವಿನಿಂದ ಅಪಾಯ ಕಂಡುಬಂದರೆ, ಅದಕ್ಕೆ ತಕ್ಕ ಉತ್ತರ ನೀಡಲು ಸಂಪೂರ್ಣ ಮಿಲಿಟರಿ ಸನ್ನದ್ಧವಾಗಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.