ADVERTISEMENT

ಬೆತ್ಲೆಹೇಮ್‌: ಎರಡು ವರ್ಷದ ಬಳಿಕ ಕ್ರಿಸ್‌ಮಸ್‌ ಸಂಭ್ರಮ

ಏಜೆನ್ಸೀಸ್
Published 7 ಡಿಸೆಂಬರ್ 2025, 16:30 IST
Last Updated 7 ಡಿಸೆಂಬರ್ 2025, 16:30 IST
ಕ್ರಿಸ್‌ಮಸ್‌ ಸಂಭ್ರಮಾಚಾರಣೆಗೆ ಸಜ್ಜುಗೊಂಡಿರುವ ಬೆತ್ಲೆಹೇಮ್‌ನ ನೇಟಿವಿಟಿ ಸ್ಕ್ವೇರ್‌ನ‌ಲ್ಲಿ ವ್ಯಕ್ತಿಯೊಬ್ಬರು ಸಾಂಟಾಕ್ಲಾಸ್ ವೇಷಧಾರಿಯಾಗಿ ಬಲೂನ್‌ಗಳು ಮಾರುತ್ತಿರುವುದು –ಎಎಫ್‌ಪಿ ಚಿತ್ರ
ಕ್ರಿಸ್‌ಮಸ್‌ ಸಂಭ್ರಮಾಚಾರಣೆಗೆ ಸಜ್ಜುಗೊಂಡಿರುವ ಬೆತ್ಲೆಹೇಮ್‌ನ ನೇಟಿವಿಟಿ ಸ್ಕ್ವೇರ್‌ನ‌ಲ್ಲಿ ವ್ಯಕ್ತಿಯೊಬ್ಬರು ಸಾಂಟಾಕ್ಲಾಸ್ ವೇಷಧಾರಿಯಾಗಿ ಬಲೂನ್‌ಗಳು ಮಾರುತ್ತಿರುವುದು –ಎಎಫ್‌ಪಿ ಚಿತ್ರ   

ಬೆತ್ಲೆಹೇಮ್‌ (ವೆಸ್ಟ್‌ಬ್ಯಾಂಕ್): ಗಾಜಾದಲ್ಲಿನ ಯುದ್ಧದಿಂದಾಗಿ ಏಸು ಕ್ರಿಸ್ತನ ಜನ್ಮಭೂಮಿ ಬೆತ್ಲೆಹೇಮ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಮರೆಯಾಗಿದ್ದ ಕ್ರಿಸ್‌ಮಸ್‌ ಸಂಭ್ರಮ ಇದೀಗ ಮತ್ತೆ ಮರುಕಳಿಸುತ್ತಿದೆ. 

ಜನರಿಲ್ಲದೇ ಬಿಕೋ ಎನ್ನುತ್ತಿದ್ದ ರೆಸ್ಟೋರೆಂಟ್‌ಗಳಲ್ಲಿ ಈ ವರ್ಷ ಮತ್ತೆ ಜನರ ನಗು, ಕುಟುಂಬಗಳ ಸಂತಸ ಕಾಣುವಂತಾಗಿದ್ದು, ದೀಪಲಂಕಾರಗಳಿಂದ ಕಂಗೊಳಿಸುತ್ತಿರುವ ರೆಸ್ಟೋರೆಂಟ್‌ಗಳು ಜನರ ಮನಸ್ಸಲ್ಲಿ ಹೊಸ ಆಶಾಭಾವ ಮೂಡಿಸಿವೆ.

ಇಸ್ರೇಲ್‌ ಆಕ್ರಮಿತ ವೆಸ್ಟ್‌ಬ್ಯಾಂಕ್‌ನ ಬೆತ್ಲೆಹೇಮ್‌ನ ಸ್ಥಳೀಯ ವ್ಯಾಪಾರಿ ಜುಕಾ ಎಂಬವರು ಈ ಬಗ್ಗೆ ಮಾತನಾಡಿ, ‘ಯುದ್ಧಕ್ಕೆ ಮುಂಚೆ ಇದ್ದಂಥ ಸ್ಥಿತಿಗೆ ಇನ್ನೂ ಮರಳಿಲ್ಲ. ಆದರೆ, ಸದ್ಯದ ಮಟ್ಟಿಗೆ ಜೀವ ಮರಳಿದಂತಾಗಿದೆ’ ಎಂದಿದ್ದಾರೆ. 

ADVERTISEMENT

‘10,000ಕ್ಕೂ ಅಧಿಕ ಮಂದಿ ಪ್ರವಾಸಿಗರು, ಯಾತ್ರಾರ್ಥಿಗಳು ಬೆತ್ಲೆಹೇಮ್‌ಗೆ ಭೇಟಿ ನೀಡುತ್ತಿದ್ದರು. ಆ ಸಂದರ್ಭದಲ್ಲಿ ನಗರದ ಎಲ್ಲರಿಗೂ ಕೆಲಸಗಳಿರುತ್ತಿದ್ದವು. ಯುದ್ಧದಿಂದ ಎಲ್ಲವೂ ಬದಲಾಗಿತ್ತು. ನಿರುದ್ಯೋಗದ ಪ್ರಮಾಣ ಶೇ14 ರಿಂದ ಶೇ 65ಕ್ಕೆ ಏರಿಕೆಯಾಗಿ, 4,000ಕ್ಕೂ ಅಧಿಕ ಮಂದಿ ಕೆಲಸ ಅರಸುತ್ತಾ ನಗರ ತೊರೆದಿದ್ದರು. ಇದೀಗ ಮತ್ತೆ ಜೀವನೋತ್ಸಾಹ ಮರುಕಳಿಸುತ್ತಿದೆ’ ಎಂದು ಇಲ್ಲಿನ ಮೇಯರ್‌ ಮಹೇರ್‌ ನಿಕೋಲಾ ಹೇಳಿದ್ದಾರೆ. 

ಜತೆಗೆ ‘ಪ್ಯಾಲೆಸ್ಟೀನಿಯರಿಗೆ ಬದುಕಿನ ಪ್ರೀತಿ ಇದೆ, ಶಾಂತಿಯುತ ಪರಿಹಾರಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂಬ ಸಂದೇಶವನ್ನು ಈ ಬಾರಿಯ ಕ್ರಿಸ್‌ಮಸ್‌ ಆಚರಣೆಯ ಮೂಲಕ ಇಡೀ ಜಗತ್ತಿಗೆ ತಲುಪಿಸಲು ನಾವು ಬಯಸಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.