ADVERTISEMENT

ಹವಾಮಾನ ಬದಲಾವಣೆ ಯೂರೋಪ್‌ನ ಭಯಾನಕ ಪ್ರವಾಹಕ್ಕೆ ಕಾರಣವೇ? ಇಲ್ಲಿದೆ ವರದಿ

ವಿಶ್ವ ಹವಾಮಾನ ಗುಣಲಕ್ಷಣ ಗುಂಪು ನೀಡಿದ ವರದಿ

ಏಜೆನ್ಸೀಸ್
Published 24 ಆಗಸ್ಟ್ 2021, 10:06 IST
Last Updated 24 ಆಗಸ್ಟ್ 2021, 10:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬರ್ಲಿನ್: ಜಾಗತಿಕ ತಾಪಮಾನ ಏರಿಕೆಯಿಂದ ಮಳೆ ಅಧಿಕ ಸುರಿಯುವ ವಿದ್ಯಮಾನ ಇನ್ನು ಸಾಮಾನ್ಯವಾಗುವ ನಿರೀಕ್ಷೆ ಇದೆ. ಕಳೆದ ತಿಂಗಳು ಯೂರೋಪ್‌ನಲ್ಲಿ ಸುರಿದ ಭಾರಿ ಮಳೆ, ಅದರಿಂದ ಉಂಟಾದ ಪ್ರವಾಹಗಳೆಲ್ಲ ಇದರ ಪರಿಣಾಮವೇ ಇರಬಹುದು, ಇದರ ಬಗ್ಗೆ ಇನ್ನಷ್ಟು ನಿಖರ ಅಧ್ಯಯನ ನಡೆಯಬೇಕಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಜುಲೈ 14 ಮತ್ತು 15 ರಂದು ಜರ್ಮನಿ ಮತ್ತು ಬೆಲ್ಜಿಯಂನಲ್ಲಿ ಸುರಿದ ಭಾರಿ ಮಳೆ, ಪ್ರವಾಹದಿಂದಾಗಿ ಕನಿಷ್ಠ 220 ಜನರು ಸಾವನ್ನಪ್ಪಿದ್ದರು.

ವಿಶ್ವ ಹವಾಮಾನ ಗುಣಲಕ್ಷಣ ಗುಂಪು ಮಂಗಳವಾರ ಬಿಡುಗಡೆ ಮಾಡಿರುವ ಅಧ್ಯಯನದ ವರದಿ ಪ್ರಕಾರ, ಜಾಗತಿಕ ತಾಪಮಾನವು 1.2 ಡಿಗ್ರಿ ಸೆಲ್ಷಿಯಸ್ಟ್‌ನಷ್ಟು ಹೆಚ್ಚಿದಾಗ ಯೂರೋಪ್‌ನಲ್ಲಿ ಮಳೆಯ ಪ್ರಮಾಣ ಶೇ 3ರಿಂದ 19ರವರೆಗೆ ಹೆಚ್ಚಾಗಿರುವುದನ್ನು ಗಮನಿಸಲಾಗಿದೆ.

ADVERTISEMENT

ಹವಾಮಾನದಲ್ಲಿ 1 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾದರೆ ಗಾಳಿಯು ನೀರನ್ನು ಹೀರಿಕೊಳ್ಳುವ ಪ್ರಮಾಣ ಶೇ 7ರಷ್ಟು ಹೆಚ್ಚುತ್ತದೆ, ಇದರ ಫಲವಾಗಿ ಮಳೆಯ ಪ್ರಮಾಣ ಅಧಿಕವಾಗುತ್ತದೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

ಈ ಗುಂಪು,‘19 ನೇ ಶತಮಾನದ ಅಂತ್ಯದಿಂದ ಇಲ್ಲಿಯವರೆಗೆ ತಾಪಮಾನದ ಏರಿಳಿತದಿಂದ ಹೇಗೆ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ ಎಂಬುದನ್ನು ಹಿಂದಿನ ದಾಖಲೆಗಳು ಮತ್ತು ಮತ್ತು ಕಂಪ್ಯೂಟರ್‌ ತಂತ್ರಾಂಶವೊಂದನ್ನು ಬಳಸಿ ಅಧ್ಯಯನ ನಡೆಸಿ ವರದಿ ತಯಾರಿಸಿದೆ.

ಈ ವರದಿಯನ್ನು ಸ್ವತಂತ್ರವಾಗಿ ಯಾವ ವಿಜ್ಞಾನಿಗಳು ಇನ್ನೂ ಮೌಲ್ಯಮಾಪನ ಮಾಡಿಲ್ಲವಾದರೂ, ವರದಿ ಸಿದ್ದಪಡಿಸಿದ ಲೇಖಕರು ಪ್ರವಾಹ, ಬರ ಮತ್ತು ಬಿಸಿಗಾಳಿಯಂತಹ ನಿರ್ದಿಷ್ಟ ಹವಾಮಾನ ವೈಪರೀತ್ಯ ಘಟನೆಗಳ ತ್ವರಿತ ಮೌಲ್ಯಮಾಪನಗಳನ್ನು ನಡೆಸಲು ವ್ಯಾಪಕವಾಗಿ ಒಪ್ಪಿಕೊಂಡ ವಿಧಾನಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ.

ಜಾಗತಿಕ ತಾಪಮಾನ ಏರಿಕೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಧಿಕ ಮಳೆ ಸುರಿಯುವುದು ನಿಶ್ಚಿತ ಎಂಬ ಅಂಶವನ್ನು ತಜ್ಞರ ತಂಡ ಒತ್ತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.