ADVERTISEMENT

ಅಮೆಜಾನ್ ಕಾಡಿನಲ್ಲಿ 40 ದಿನಗಳ ಬಳಿಕ ಪತ್ತೆಯಾಗಿದ್ದ ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ

ಎಎಫ್‌ಪಿ
Published 15 ಜುಲೈ 2023, 4:04 IST
Last Updated 15 ಜುಲೈ 2023, 4:04 IST
ಕಾಡಿನಲ್ಲಿ ಮಕ್ಕಳು ಪತ್ತೆಯಾದ ಸಂದರ್ಭ
ಕಾಡಿನಲ್ಲಿ ಮಕ್ಕಳು ಪತ್ತೆಯಾದ ಸಂದರ್ಭ   

ಬೊಗೋಟಾ (ಕೊಲಂಬಿಯಾ): ಲಘು ವಿಮಾನ ಅಪಘಾತದ ಬಳಿಕ 40 ದಿನ ಅಮೆಜಾನ್‌ ದಟ್ಟ ಅರಣ್ಯದಲ್ಲಿ ಸಿಲುಕಿದ್ದ ನಾಲ್ಕು ಮಕ್ಕಳು ಒಂದು ತಿಂಗಳ ಬಳಿಕ ಸೇನಾ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಅವರೆಲ್ಲ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮೇ 1ರಂದು ಕೊಲಂಬಿಯಾದ ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನವೊಂದು ಪತನಗೊಂಡಿತ್ತು. ಅದರಲ್ಲಿದ್ದ ಇತರ ಮೂವರ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಕ್ಕಳಿಗಾಗಿ ಕೊಲಂಬಿಯಾ ಸೇನೆ ‘ಆಪರೇಷನ್‌ ಆನ್‌ ಹೋಪ್‌‘ ಹೆಸರಿನಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.

ಲೆಸ್ಲಿ (13 ), ಸೊಲೀನಿ (9), ಟೈನ್ ನೊರಿಯಲ್ (4) ಮತ್ತು ಕ್ರಿಸ್ಟಿನ್ (11 ತಿಂಗಳು) ಜೂನ್‌ 9ರಂದು ಸೇನೆಗೆ ಸಿಕ್ಕಿದ್ದರು. ಅವರನ್ನು ಬೊಗೋಟಾದಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 

ADVERTISEMENT

ಕಾಡಿನ ಬಗ್ಗೆ ಮಕ್ಕಳಿಗಿರುವ ಜ್ಞಾನವೇ ಅವರು ಬದುಕಿ ಬರಲು ಕಾರಣ ಎಂದು ಅವರ ಸಂಬಂಧಿಕರು ಹೇಳಿದ್ದರು.

ನಾಲ್ಕೂ ಮಕ್ಕಳು ಗುರುವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಆರೋಗ್ಯವಾಗಿದ್ದಾರೆ ಎಂದು ಮಕ್ಕಳ ಚಿಕಿತ್ಸೆ ಹೊಣೆ ಹೊತ್ತಿದ್ದ ಕೊಲೊಂಬಿಯಾದ ಕುಟುಂಬ ಕಲ್ಯಾಣ ಸಂಸ್ಥೆಯ ನಿರ್ದೇಶಕಿ ಆಸ್ಟ್ರಿಡ್ ಕ್ಯಾಸೆರಸ್‌ ಮಾಧ್ಯಮದವರಿಗೆ ಹೇಳಿದ್ದಾರೆ.

ಮಕ್ಕಳು 40 ದಿನ ಕಾಡಿನಲ್ಲಿ ಅಲೆದಿದ್ದರೂ ಅವರ ಮೇಲೆ ದೈಹಿಕವಾಗಿ ಯಾವುದೇ ರೀತಿಯ ಪರಿಣಾಮವಾಗಿಲ್ಲ. 11 ತಿಂಗಳ ಮಗು ಕೂಡ ಸಂಪೂರ್ಣವಾಗಿ ಗುಣಮುಖವಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಮೆಜಾನ್ ಕಾಡಿನಲ್ಲಿ ವಿಮಾನ ಪ‍ತನ: ಹಣ್ಣು, ಬೇರು ತಿಂದು ಬದುಕಿದ್ದ ಮಕ್ಕಳು

ಮಕ್ಕಳು ಪತ್ತೆಯಾದ ಬಳಿಕ ಅವರ ಪಾಲನೆ ವಿಚಾರವಾಗಿ ಅವರ ಸಂಬಂಧಿಕರ ನಡುವೆ ತಿಕ್ಕಾಟ ನಡೆಯುತ್ತಿದೆ. ಅಧಿಕಾರಿಗಳು ಮಕ್ಕಳ ಕೌಟುಂಬಿಕ ಹಿನ್ನೆಲೆಯ ತನಿಖೆ ನಡೆಸಲಿದ್ದಾರೆ. ಹೀಗಾಗಿ ಕುಟುಂಬ ಕಲ್ಯಾಣ ಸಂಸ್ಥೆಯೇ ಕನಿಷ್ಟ 6 ತಿಂಗಳವರೆಗೆ ಮಕ್ಕಳ ಪಾಲನೆ ನೋಡಿಕೊಳ್ಳಲಿದೆ.

ಮಕ್ಕಳು ಸದ್ಯ ಬೇರೆ ಮಕ್ಕಳೊಂದಿಗೆ ಆಶ್ರಯ ಶಿಬಿರದಲ್ಲಿ ಉಳಿಯಲಿದ್ದಾರೆ. ಆ ಮಾಹಿತಿಯನ್ನು ಬಹಿರಂಗಪಡಿಸಲಾಗದು. ಅವರಿಗೆ ಹಿತಾನುಭವ ಉಂಟಾಗಲಿ ಎಂಬ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಉಳಿಯಲಿದ್ದಾರೆ ಎಂದು ಕ್ಯಾಸೆರಸ್‌ ಹೇಳಿದ್ದಾರೆ.

ಸುಮಾರು 200 ಮಂದಿ ಸೇನಾ ಸಿಬ್ಬಂದಿ, ಸ್ಥಳೀಯರು ಹಾಗೂ ಶ್ವಾನಗಳು ಮಕ್ಕಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.