ADVERTISEMENT

ಅಮೆರಿಕ ಮೇಲಿನ ಕೋವಿಡ್‌ ದಾಳಿ ‘ಪರ್ಲ್‌ ಹಾರ್ಬರ್‌’ಗಿಂತಲೂ ಭೀಕರ: ಟ್ರಂಪ್‌  

ಪಿಟಿಐ
Published 7 ಮೇ 2020, 3:20 IST
Last Updated 7 ಮೇ 2020, 3:20 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಎರಡನೇ ಜಾಗತಿಕ ಮಹಾಸಮರದ ವೇಳೆ ಅಮೆರಿಕದ ಮೇಲೆ ನಡೆದಿದ್ದ ಪರ್ಲ್‌ ಹಾರ್ಬರ್‌ ದಾಳಿ ಮತ್ತು ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ 9/11 ಮೇಲಿನ ದಾಳಿಗಿಂತಲೂ ಕೊರೊನಾ ವೈರಸ್‌ನ ಅಟ್ಟಹಾಸವು ಭೀಕರವಾದದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ನಮ್ಮ ದೇಶದ ಮೇಲೆ ಇದುವರೆಗೆ ನಡೆದಿರದ ಅತ್ಯಂತ ಕೆಟ್ಟ ದಾಳಿಗೆ ನಾವು ಸಾಕ್ಷಿಯಾಗಿದ್ದೇವೆ. ಇದು ನಿಜಕ್ಕೂ ನಾವು ಕಂಡ ಅತ್ಯಂತ ಕೆಟ್ಟ ದಾಳಿ. ಪರ್ಲ್ ಹಾರ್ಬರ್‌ ದಾಳಿಗಿಂತಲೂ ಭೀಕರ. ಇದು ವಿಶ್ವ ವಾಣಿಜ್ಯ ಕಟ್ಟಡಗಳ ಮೇಲಿನ ದಾಳಿಗಿಂತಲೂ ಘೋರ. ಈ ರೀತಿಯ ದಾಳಿ ಎಂದಿಗೂ ನಡೆದಿಲ್ಲ,’ ಎಂದು ಶ್ವೇತಭವನದ ಓವಲ್ ಸಭಾಂಗಣದಲ್ಲಿ ನರ್ಸ್‌ಗಳೊಂದಿಗೆ ನಡೆದ ಸಮಾಲೋಚನೆಯಲ್ಲಿ ಟ್ರಂಪ್‌ ಹೇಳಿದರು.

ADVERTISEMENT

ಕೊರೊನಾ ವೈರಸ್‌ ದಾಳಿಯನ್ನು ಪರ್ಲ್‌ ಹಾರ್ಬರ್‌ ದಾಳಿ ಮತ್ತು 9/11 ದಾಳಿಗೆ ಹೋಲಿಸಿದ್ದರ ಬಗ್ಗೆ ವರದಿಗಾರರು ವೈಟ್‌ಹೌಸ್‌ನ ಮತ್ತೊಂದು ಕಾರ್ಯಕ್ರಮದಲ್ಲಿ ಟ್ರಂಪ್‌ ಅವರನ್ನು ಪ್ರಶ್ನಿಸಿದರು. ಈ ವೇಳೆ ಅವರು ತಮ್ಮ ಹೋಲಿಕೆಯನ್ನು ಸಮರ್ಥಿಸಿದರು. ‘ಅಗೋಚರ ಶತ್ರುವಿನ ಯುದ್ಧವನ್ನು ನಾನು ಕಾಣುತ್ತಿದ್ದೇನೆ. ವೈರಸ್‌ ಇಲ್ಲಿಗೆ ಹೇಗೆ ಬಂತೋ ಗೊತ್ತಿಲ್ಲ. ಅದನ್ನು ತಡೆಬಹುದಿತ್ತು. ಆದರೆ, ಆಗಿಲ್ಲ. ಇದು ಅಗೋಚರ ಶತ್ರುವಿನ ಯುದ್ಧ,’ ಎಂದು ಅವರು ಹೇಳಿದರು.

‘ಪರ್ಲ್ ಹಾರ್ಬರ್‌ ದಾಳಿಯಲ್ಲಿ ಸಂಭವಿಸಿದ್ದಕ್ಕಿಂತಲೂ ಹೆಚ್ಚಿನ ಸಾವು ಕೊರೊನಾ ವೈರಸ್‌ನಿಂದ ಸಂಭವಿಸಿದೆ. ಇದು ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಗಿಂತಲೂ ಹೆಚ್ಚಿನ ಜನರನ್ನು ಕೊಂದಿದೆ. ಆ ದಾಳಿಯಲ್ಲಿ 3000 ಜನ ಸತ್ತಿದ್ದರು. ಹಾಗಾಗಿ ವೈರಸ್‌ ದಾಳಿಯನ್ನು ಯುದ್ಧವೆಂದು ನೋಡುತ್ತೇವೆ’ ಎಂದು ಅವರು ಹೇಳಿದರು.

ಏನಿದು ಪರ್ಲ್‌ಹಾರ್ಬರ್‌ ದಾಳಿ

ಫೆಸಿಫಿಕ್‌ ಸಾಗರದ ಹಾವಾಯಿ ದ್ವೀಪದ ಬಳಿಯ ಅಮೆರಿಕದ ನೌಕನೆಲೆ ಮೇಲೆ 1941ರಲ್ಲಿ ಜಪಾನ್‌ ಅನಿರೀಕ್ಷಿತವಾಗಿ ವೈಮಾನಿಕ ದಾಳಿ ನಡೆಸಿತ್ತು. ಜಪಾನೀಯರಿಂದ ನಡೆದ ಯಾರೂ ಊಹಿಸದಿದ್ದ ಈ ದಾಳಿಯಿಂದಾಗಿ ಅಮೆರಿಕದಅತ್ಯಾಧುನಿಕ ಯುದ್ಧನೌಕೆಗಳು, ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ನಾಶಗೊಂಡವು.ಸಾವಿರಾರು ಮಂದಿ ಹತರಾಗಿದ್ದರು. ಈ ಘಟನೆ ಅಮೆರಿಕ ಎರಡೇ ವಿಶ್ವ ಯುದ್ಧದಲ್ಲಿ ಭಾಗವಹಿಸುವಂತೆ ಮಾಡಿತು.

ಇನ್ನು 2001ರ ಸೆ. 11ರಲ್ಲಿ ಅಮೆರಿಕದ ಎರಡು ವಾಣಿಜ್ಯ ಕಟ್ಟಡಗಳ ಮೇಲೆ ಭಯೋತ್ಪದಕ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಈ ಘಟನೆಯಲ್ಲಿ 3 ಸಾವಿರ ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.