ADVERTISEMENT

ವುಹಾನ್ ಕಡಿಮೆ ಅಪಾಯದ ಪ್ರದೇಶ: ಚೀನಾ ಘೋಷಣೆ

ಪಿಟಿಐ
Published 19 ಏಪ್ರಿಲ್ 2020, 19:23 IST
Last Updated 19 ಏಪ್ರಿಲ್ 2020, 19:23 IST
ಚೀನಾದ ವುಹಾನ್ ನಗರದಲ್ಲಿ ಬದುಕು ನಿಧಾನವಾಗಿ ಸಹಜಗತಿಗೆ ಮರಳುತ್ತಿದೆ.
ಚೀನಾದ ವುಹಾನ್ ನಗರದಲ್ಲಿ ಬದುಕು ನಿಧಾನವಾಗಿ ಸಹಜಗತಿಗೆ ಮರಳುತ್ತಿದೆ.   

ಬೀಜಿಂಗ್/ವುಹಾನ್: ಕೊರೊನಾ ವೈರಸ್‌ನ ಕೇಂದ್ರ ಸ್ಥಾನವಾಗಿರುವ ವುಹಾನ್ ನಗರವನ್ನು ಕಡಿಮೆ ಅಪಾಯದ ಪ್ರದೇಶವೆಂದು ಚೀನಾ ಭಾನುವಾರ ಘೋಷಿಸಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೊರೊನಾ ವೈರಸ್‌ನಿಂದ ವುಹಾನ್‌ನಲ್ಲಿ ಸಾವಿಗೀಡಾದವರ ಸಂಖ್ಯೆಯಲ್ಲಿ ಶೇ 50ರಷ್ಟು ಏರಿಸಿ ಚೀನಾ ಪರಿಷ್ಕರಿಸಿತ್ತು. ಈಚೆಗಷ್ಟೇ 16 ಹೊಸ ಕೋವಿಡ್–19 ಪ್ರಕರಣಗಳೂ ಪತ್ತೆಯಾಗಿದ್ದವು. ಈನಡುವೆಯೇ ಚೀನಾ ವುಹಾನ್‌ ನಗರವನ್ನು ಕಡಿಮೆ ಅಪಾಯದ ಪ್ರ‌ದೇಶವೆಂದು ಘೋಷಿಸಿದೆ.

ಚೀನಾದ ಸ್ಟೇಟ್ ಕೌನ್ಸಿಲ್ ಹೊರಡಿಸಿರುವ ಮಾರ್ಗಸೂಚಿಯಲ್ಲಿ ವ್ಯಾಖ್ಯಾನಿಸಲಾಗಿರುವ ಅಪಾಯದ ಮಾನದಂಡಗಳ ಪ್ರಕಾರ, ಕಳೆದ 14 ದಿನಗಳಲ್ಲಿ ಹೊಸದಾಗಿ ದೃಢೀಕರಿಸಿದ ಪ್ರಕರಣಗಳಿಲ್ಲದ ನಗರಗಳು, ಕೌಂಟಿ ಮತ್ತು ಜಿಲ್ಲೆಗಳನ್ನು ಕಡಿಮೆ ಅಪಾಯದ ಪ್ರದೇಶಗಳೆಂದು ವರ್ಗೀಕರಿಸಲಾಗಿದೆ.

ADVERTISEMENT

2019ರ ಡಿಸೆಂಬರ್‌ನಲ್ಲಿ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕಾಳ್ಗಿಚ್ಚಿನಂತೆ ಹರಡಿತು. ಇಲ್ಲಿನ 11 ದಶಲಕ್ಷ ಜನರು ನಗರವನ್ನು ತೊರೆದು, ಸಂಪೂರ್ಣವಾಗಿ 12 ದಿನಗಳ ಲಾಕ್‌ಡೌನ್ ಮಾಡಿದ ಬಳಿಕ, ವುಹಾನ್‌ ಅನ್ನು ಕಡಿಮೆ ಅಪಾಯದ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಚೀನಾದಲ್ಲಿ ಶನಿವಾರ 16 ಹೊಸ ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಭಾನುವಾರ ತಿಳಿಸಿದೆ. ಶನಿವಾರ ಯಾವುದೇ ಸಾವಿನ ವರದಿಯಾಗಿಲ್ಲ. ಇದುವರೆಗೆ ಸಾವಿಗೀಡಾದವರ ಸಂಖ್ಯೆ 4,632 ಇದೆ ಎಂದು ಆಯೋಗ ಮಾಹಿತಿ ನೀಡಿದೆ.

ಈ ನಡುವೆ ಚೀನಾದಲ್ಲಿ ಶನಿವಾರಕೊರೊನಾ ವೈರಸ್‌ ಸೋಂಕಿನ ಯಾವುದೇ ಲಕ್ಷಣಗಳನ್ನು ಹೊಂದಿರದ 44 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಎನ್‌ಎಚ್‌ಸಿ ತಿಳಿಸಿದೆ. ಇದುವರೆಗೆ ಇಂಥ 999 ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 186 ವಿದೇಶಗಳಿಂದ ಬಂದ ಪ್ರಕರಣಗಳಾಗಿವೆ. ಈ ಪ್ರಕರಣಗಳನ್ನು ವೈದ್ಯಕೀಯ ಪರಿಶೀಲನೆಯಲ್ಲಿರಿಸಲಾಗಿದೆ.

ಈ ಪ್ರಕರಣಗಳಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳಾದಜ್ವರ, ಕೆಮ್ಮು ಅಥವಾ ಗಂಟಲು ನೋವಿನಂಥ ಲಕ್ಷಣಗಳು ಕಂಡು ಬಂದಿಲ್ಲ. ಆದರೆ, ಈ ರೀತಿಯ ಪ್ರಕರಣಗಳು ಮತ್ತೊಬ್ಬರಿಗೆ ಸೋಂಕು ಹರಡುತ್ತಾರೆ ಎಂದು ಎನ್ಎಚ್‌ಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.