ADVERTISEMENT

'ಗಾಳಿಯಿಂದ ಹರಡುತ್ತಿದೆ ಕೊರೊನಾ ಸೋಂಕು': ಮಾರ್ಗಸೂಚಿ ಬದಲಿಸಲು ವಿಜ್ಞಾನಿಗಳ ಮನವಿ

32 ದೇಶಗಳ 239 ವಿಜ್ಞಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2020, 6:59 IST
Last Updated 6 ಜುಲೈ 2020, 6:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗಾಳಿಯಲ್ಲಿರುವ ಕೊರೊನಾ ವೈರಸ್‌ನ ಅತಿಸಣ್ಣ‌ ಜೀವಕಣಗಳು ಮನುಷ್ಯರಿಗೆ ಸೋಂಕು ಉಂಟು ಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಶಿಫಾರಸುಗಳಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ'ಎಂದು ನೂರಾರು ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿರುವ ವರದಿಯಲ್ಲಿ ಹೇಳಿದ್ದಾರೆ ಎಂದು 'ನ್ಯೂಯಾರ್ಕ್‌ ಟೈಮ್ಸ್‌' ವರದಿ ಮಾಡಿದೆ.

ಸೋಂಕಿತರು ಸೀನಿದಾಗ, ಕೆಮ್ಮಿದಾಗ ಅಥವಾ ಮಾತನಾಡುವಾಗಬಾಯಿ ಅಥವಾ ಮೂಗಿನಿಂದ ಹೊರಬೀಳುವ ದ್ರವಕಣಗಳಿಂದಾಗಿ ಕೊರೊನಾ ವೈರಸ್‌ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿತ್ತು.

'ಗಾಳಿಯಲ್ಲಿರುವ ಅತಿಸಣ್ಣ ಕಣಗಳಿಂದಲೂ ಸೋಂಕು ಹರಡುತ್ತದೆ'ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಬರೆದಿರುವ ಬಹಿರಂಗ ಪತ್ರದಲ್ಲಿ 32 ದೇಶಗಳ 239 ವಿಜ್ಞಾನಿಗಳು ಹೇಳಿದ್ದಾರೆ. ಈ ಪತ್ರವನ್ನು ಮುಂದಿನ ದಿನಗಳಲ್ಲಿ ವಿಜ್ಞಾನ ನಿಯತಕಾಲಿಕೆಯಲ್ಲಿ ಪ್ರಕಟಿಸುವ ಉದ್ದೇಶವೂ ವಿಜ್ಞಾನಿಗಳಿಗೆ ಇದೆ.

ADVERTISEMENT

ಈ ಕುರಿತು ರಾಯಿಟರ್ಸ್‌ ಸುದ್ದಿಸಂಸ್ಥೆಯ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲುವಿಶ್ವ ಆರೋಗ್ಯ ಸಂಸ್ಥೆಯು ನಿರಾಕರಿಸಿದೆ.

ಸೀನಿದಾಗ ಹೊರಬರುವ ದ್ರವಕಣಗಳ ಗುಳ್ಳೆಗಳು ಗಾಳಿಯಲ್ಲಿ ಹಿಗ್ಗುತ್ತವೆ. ಸೀನಿದಾಗ ವೇಗವಾಗಿ ಹೊರಬೀಳುವ ದ್ರವಕಣಗಳು ಒಂದು ಕೊಠಡಿಯಷ್ಟು ದೊಡ್ಡದಾಗಿ ಹರಡಿಕೊಳ್ಳುತ್ತವೆ. ದೂರಕ್ಕೆ ಕ್ರಮಿಸುತ್ತವೆ. ಇಂಥ ಅತಿಸೂಕ್ಷ್ಮ ಕಣಗಳು ಗಾಳಿಯಲ್ಲಿ ತೇಲುತ್ತಾ ಮತ್ತೊಬ್ಬರ ದೇಹ ಪ್ರವೇಶಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

'ಗಾಳಿಯಿಂದ ಸೋಕು ಹರಡುತ್ತದೆ ಎಂದು ನಂಬಲು ಸಾಕಷ್ಟು ಆಧಾರಗಳಿಲ್ಲ' ಎಂದೇ ವಿಶ್ವ ಆರೋಗ್ಯ ಸಂಸ್ಥೆಯು 'ನ್ಯೂಯಾರ್ಕ್‌ ಟೈಮ್ಸ್‌'ಗೆ ಪ್ರತಿಕ್ರಿಯಿಸಿದೆ.

'ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತದೆ ಎಂಬುದನ್ನು ಪರಿಗಣಿಸಲು ನಾವು ಸಿದ್ಧರಿದ್ದೇವೆ. ಆದರೆ ಈ ಪ್ರತಿಪಾದನೆಗೆ ಈವರೆಗೆ ಗಟ್ಟಿ ಆಧಾರಗಳು ದೊರೆದಿಲ್ಲ' ಎಂಬವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

ವಿಜ್ಞಾನಿಗಳ ಪತ್ರದಲ್ಲಿ ಏನಿದೆ?

* ವೈರಸ್‌ ಗಾಳಿಯಲ್ಲಿ ಸಂಚರಿಸುವುದರಿಂದ ಸಾರ್ವಜನಿಕ ಸ್ಥಳಗಳಲ್ಲಷ್ಟೇ ಅಲ್ಲ, ಮನೆ, ಕಚೇರಿ ಸೇರಿದಂತೆ ಒಳಾಂಗಣಗಳಲ್ಲೂ ಮಾಸ್ಕ್‌ ಧರಿಸುವುದು ಕ್ಷೇಮ.

* ಸಾಮಾಜಿಕ ಅಂತರ ಕಾಯ್ದುಕೊಂಡರಷ್ಟೇ ಸಾಲದು, ಮಾಸ್ಕ್‌ ಧರಿಸುವುದು ಕೂಡ ಸೋಂಕು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

* ಶಾಲೆ, ಕಾಲೇಜು, ನರ್ಸಿಂಗ್ ಹೋಂ, ವಾಣಿಜ್ಯ ಮಳಿಗೆಗಳು ಮತ್ತು ಮನೆಗಳಲ್ಲಿ ಸಾಕಷ್ಟು ಪರಿಶುದ್ಧ ಗಾಳಿ ಇರುವಂತೆ ನೋಡಿಕೊಳ್ಳಬೇಕು.

* ಎನ್ ‌95ನಂತಹಗುಣಮಟ್ಟದ ಮಾಸ್ಕ್‌ಗಳು ವೈರಸ್‌ ಹರಡದಂತೆ ತಡೆಯುವ ಸಾಮರ್ಥ್ಯ ಹೊಂದಿವೆ. ಕಳಪೆ ಗುಣಮಟ್ಟದ ಮಾಸ್ಕ್‌ಗಳು ವೈರಸ್ ಹರಡದಂತೆ ತಡೆಯಲಾರವು.

* ಅತಿನೇರಳೆ ಕಿರಣಗಳಿಗೆ (ಅಲ್ಟ್ರಾವಯೋಲೆಟ್ ಲೈಟ್‌)ಗಾಳಿಯಲ್ಲಿ ತೇಲಾಡುತ್ತಿರುವ ವೈರಸ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ಇದೆ.

* ಸಾರ್ವಜನಿಕ ಸ್ಥಳಗಳು, ಜನದಟ್ಟಣೆಯ ಪ್ರದೇಶಗಳಲ್ಲಿ ಕೊರೊನಾ ಸೋಂಕು ಗಾಳಿಯ ಮೂಲಕ ಹರಡುವ ಸಾಧ್ಯತೆ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.