ADVERTISEMENT

ಭಾರತದ ಕೃಷಿ ಕಾಯ್ದೆ ವಿರೋಧಿಸಿ ಅಮೆರಿಕದಲ್ಲೂ ಪ್ರತಿಭಟನೆ

ರೈತರಿಗೆ ಬೆಂಬಲ ಸೂಚಿಸಿ ಹಲವು ನಗರಗಳಲ್ಲಿ ಸಿಖ್ಖ–ಅಮೆರಿಕನ್‌ರಿಂದ ರ‍್ಯಾಲಿ

ಪಿಟಿಐ
Published 6 ಡಿಸೆಂಬರ್ 2020, 7:23 IST
Last Updated 6 ಡಿಸೆಂಬರ್ 2020, 7:23 IST
ಇಂಡಿಯಾನಾಪೊಲಿಸ್‌ನಲ್ಲಿ ಸಿಖ್ಖ ಸಮುದಾಯದವರು ಪ್ರತಿಭಟನೆ ನಡೆಸಿದರು   ಪಿಟಿಐ ಚಿತ್ರ
ಇಂಡಿಯಾನಾಪೊಲಿಸ್‌ನಲ್ಲಿ ಸಿಖ್ಖ ಸಮುದಾಯದವರು ಪ್ರತಿಭಟನೆ ನಡೆಸಿದರು   ಪಿಟಿಐ ಚಿತ್ರ   

ವಾಷಿಂಗ್ಟನ್‌: ಕೃಷಿಗೆ ಸಂಬಂಧಿಸಿದ ಹೊಸ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಮೆರಿಕದ ಹಲವು ನಗರಗಳಲ್ಲಿ ಸಿಖ್ಖ–ಅಮೆರಿಕನ್ನರು ಶಾಂತಿಯುತ ಪ್ರತಿಭಟನಾ ರ‍್ಯಾಲಿಗಳನ್ನು ನಡೆಸಿದರು.

ಕ್ಯಾಲಿಫೋರ್ನಿಯಾದಿಂದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ಕಾನ್ಸುಲೇಟ್‌ ಕಚೇರಿಯವರೆಗೆ ಪ್ರತಿಭಟನಾಕಾರರು ಕಾರು ರ‍್ಯಾಲಿ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಇಂಡಿಯಾನಾಪೊಲಿಸ್‌ನಲ್ಲಿಯೂ ನೂರಾರು ಮಂದಿ ಸೇರಿ ಪ್ರತಿಭಟನೆ ವ್ಯಕ್ತಪಡಿಸಿದರು.

‘ಹೊಸ ಕೃಷಿ ಕಾಯ್ದೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಬಡತನವೂ ಹೆಚ್ಚಾಗಲಿದೆ. ಕಾರ್ಪೋರೇಟ್‌ ಕಂಪನಿಗಳ ಏಕಸ್ವಾಮ್ಯ ಸಾಧಿಸಲು ಅನುಕೂಲವಾಗಲಿದೆ. ಹೀಗಾಗಿ, ಈ ಕಾಯ್ದೆಗಳನ್ನು ರದ್ದುಪಡಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

‘ರೈತರ ಹಿತಾಸಕ್ತಿಯನ್ನು ಕಾಪಾಡಬೇಕು. ಅಮೆರಿಕ ಮತ್ತು ಕೆನಡಾ ಸೇರಿದಂತೆ ಜಗತ್ತಿನ ಹಲವು ನಗರಗಳ ಜನತೆ ಈ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತದ ಕೃಷಿ ಮಾರುಕಟ್ಟೆಯನ್ನು ಖಾಸಗಿ ವಲಯಕ್ಕೆ ಒಪ್ಪಿಸುವ ಹುನ್ನಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗುರಿಂದರ್‌ ಸಿಂಗ್‌ ಖಲ್ಸಾ ಹೇಳಿದರು.

ಷಿಕಾಗೊ, ವಾಷಿಂಗ್ಟನ್‌ ಡಿ.ಸಿನಲ್ಲಿಯೂ ಸಿಖ್ಖರು ಸಭೆ ಸೇರಿ ಭಾರತದ ರೈತರಿಗೆ ಬೆಂಬಲ ಸೂಚಿಸಿದರು. ‘ರೈತ ಇಲ್ಲದಿದ್ದರೆ ಆಹಾರ ಇಲ್ಲ. ರೈತರನ್ನು ರಕ್ಷಿಸಿ’ ಎನ್ನುವ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು.

’ಭಾರತ ಸರ್ಕಾರಕ್ಕೆ ಸ್ಪಷ್ಟವಾದ ಸಂದೇಶ ನೀಡುವ ನಿಟ್ಟಿನಲ್ಲಿ ನಾವು ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ’ ಎಂದು ಅಮಾನ್‌ದೀಪ್‌ ಸಿಂಗ್‌ ಹುಂಡಾಲ್‌ ಹೇಳಿದರು.

‘ಭಾರತ ಸರ್ಕಾರ ಕೃಷಿಗೆ ಸಂಬಂಧಿಸಿದ ಎಲ್ಲ ಮೂರು ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು’ ಎಂದು ಸಿಖ್ಖ ನಾಯಕ ದರ್ಶನ್‌ ಸಿಂಗ್‌ ದರಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.