ADVERTISEMENT

ಅಮೆರಿಕದಲ್ಲಿ ತುರ್ತು ಬಳಕೆಗೆ 'ಮಾಡರ್ನಾ' ಕೋವಿಡ್-19 ಲಸಿಕೆ ಸಿದ್ಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2020, 5:16 IST
Last Updated 18 ಡಿಸೆಂಬರ್ 2020, 5:16 IST
ಮಾಡರ್ನಾ ಕೋವಿಡ್-19 ಲಸಿಕೆ
ಮಾಡರ್ನಾ ಕೋವಿಡ್-19 ಲಸಿಕೆ   

ನ್ಯೂಯಾರ್ಕ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಸಮರೋಪಾದಿಯಲ್ಲಿ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಮಾಡರ್ನಾ ತಯಾರಿಸಿದ ಕೋವಿಡ್-19 ಲಸಿಕೆಯು ಅನುಮೋದನೆಗೆ ಮತ್ತಷ್ಟು ಹತ್ತಿರವಾಗಿದೆ.

ಅಮೆರಿಕದಲ್ಲಿ ರೋಗದ ಹರಡುವಿಕೆಯು ಮತ್ತಷ್ಟು ಹೆಚ್ಚಳಗೊಂಡಿರುವಂತೆಯೇ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಈಗ ಅಮೆರಿಕದ ಆಹಾರ ಹಾಗೂ ಔಷಧ ಆಡಳಿತವು (ಎಫ್‌ಡಿಎ) ಮಾರ್ಡನಾ ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮೋದನೆ ನೀಡುವಂತೆ ಸ್ವತಂತ್ರ ತಜ್ಞರ ಸಮಿತಿಯು ಶಿಫಾರಸು ಮಾಡಿದೆ.

ಈ ಸಂಬಂಧ ಅಧಿಕೃತ ಘೋಷಣೆಯು ಶುಕ್ರವಾರ ಹೊರಬೀಳುವ ಸಾಧ್ಯತೆಯಿದೆ. 20 ಮತಗಳು ಮಾಡರ್ನಾ ಲಸಿಕೆ ಬಳಕೆಯ ಪರ ದೊರಕಿದರೆ ಒಂದು ಮತದ ವಿರೋಧ ವ್ಯಕ್ತವಾಯಿತು.

ADVERTISEMENT

ಇದರೊಂದಿಗೆ ಮಾಡರ್ನಾ ಸಾರ್ವಜನಿಕರಿಗೆ ಲಸಿಕೆ ನೀಡಲು ಪ್ರಾರಂಭಿಸಲಿರುವ ಎರಡನೇ ಸಂಸ್ಥೆ ಎಂದೆನಿಸಲಿದೆ. ಈ ಮೊದಲು ಕಳೆದ ವಾರ ಫೈಜರ್ ಬಯೋಟೆಕ್‌ಗೆ ಅನುಮೋದನೆ ದೊರಕಿತ್ತು.

ಸಾಮಾನ್ಯ ತಾಪಮಾನದಲ್ಲಿ ಸಂಗ್ರಹಿಸಿಡಲು ಸಾಧ್ಯವಾಗಿರುವುದರಿಂದ ಮಾಡರ್ನಾ ಲಸಿಕೆಯನ್ನು ಹೆಚ್ಚು ವ್ಯಾಪಕವಾಗಿ ವಿತರಿಸಬಹುದು. ಫೈಜರ್-ಬಯೋಟೆಕ್ ಲಸಿಕೆಗಿಂತ ಭಿನ್ನವಾಗಿ ಅಲ್ಟ್ರಾಕೋಲ್ಡ್ ಸಂಗ್ರಹಣೆಯ ಅಗತ್ಯವಿಲ್ಲ. ಸಣ್ಣ ಸಣ್ಣ ಬ್ಯಾಚ್‌ಗಳಲ್ಲಿ ಬರುವುದರಿಂದ ಕಡಿಮೆ ಜನಸಂಖ್ಯೆಯ ಪ್ರದೇಶಗಳಲ್ಲಿನ ಆಸ್ಪತ್ರೆಗಳಲ್ಲೂ ತ್ವರಿತವಾಗಿ ಬಳಕೆ ಮಾಡಲು ಸಾಧ್ಯವಾಗಲಿದೆ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ವಿಜ್ಞಾನಿಗಳ ಸಹಯೋಗದಲ್ಲಿ ಮಾಡರ್ನಾ ಲಸಿಕೆಯನ್ನು ತಯಾರಿಸಲಾಗಿದೆ. ಮಾಡರ್ನಾ ಲಸಿಕೆಯು ಶೇಕಡಾ 94.1ರಷ್ಟು ಪರಿಣಾಮಕಾರಿಯಾಗಿದ್ದು, ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.