ADVERTISEMENT

ಕೋವಿಡ್ 19: ಪ್ರಯಾಣ, ಕ್ವಾರಂಟೈನ್ ಹಣ ಇಲ್ಲದೆ ವಿದೇಶದಲ್ಲಿ ಆಂಧ್ರ ಜನರು ಅತಂತ್ರ

​ಪ್ರಜಾವಾಣಿ ವಾರ್ತೆ
Published 10 ಮೇ 2020, 14:49 IST
Last Updated 10 ಮೇ 2020, 14:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಕೆಲಸಕ್ಕಾಗಿ ಹೈದರಾಬಾದ್‌ನಿಂದ ವಿದೇಶಗಳಿಗೆ ತೆರಳಿದ್ದ ಸಾವಿರಾರು ಮಂದಿ ವಂದೇ ಭಾರತ್ ವಿಶೇಷ ವಿಮಾನದಲ್ಲಿ ತಮ್ಮ ತವರಿಗೆ ಬರಲಾಗದೆ ಕೊಲ್ಲಿ ರಾಷ್ಟ್ರಗಳಲ್ಲಿ ಉಳಿಯುವಂತಾಗಿದೆ.

ಕಾರಣ ಅವರು ವಂದೇ ಭಾರತ್ ವಿಶೇಷ ವಿಮಾನಪ್ರಯಾಣದ ವೆಚ್ಚ, ತವರು ರಾಜ್ಯ ಆಂಧ್ರಪ್ರದೇಶಕ್ಕೆ ಬಂದರೆ ಇಲ್ಲಿ 14 ದಿನಗಳ ಕ್ವಾರಂಟೈನ್ ವೆಚ್ಚನೀಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕೊಲ್ಲಿ ರಾಷ್ಟ್ರಗಳಿಂದ 163 ಮಂದಿಯನ್ನು ಹೊತ್ತು ತಂದ ವಂದೇ ಭಾರತ್ ವಿಮಾನ ಶನಿವಾರ ಹೈದರಾಬಾದ್‌ನ ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.ಬಂದವರೆಲ್ಲಾ ನಿಜಾಮಬಾದ್ ಹಾಗೂ ಕರಿಂನಗರ ಜಿಲ್ಲೆಯವರು. ಇವರೆಲ್ಲಾ ಕುವೈತ್‌ನಿಂದ ಬಂದವರು. ವಿಮಾನ ಪ್ರಯಾಣ ವೆಚ್ಚ ಹಾಗೂ ಕ್ವಾರಂಟೈನ್ ದಿನದ ವೆಚ್ಚವನ್ನುನೀಡುವುದಾಗಿ ಒಪ್ಪಿಕೊಂಡವರನ್ನುಮಾತ್ರ ವಿಮಾನದಲ್ಲಿ ಕರೆತರಲಾಗಿದೆ. ವೆಚ್ಚವನ್ನು ನೀಡಲು ಸಾಧ್ಯವಿಲ್ಲದವರು ಹಿಂತಿರುಗಿದ್ದಾರೆ ಎಂದು ತೆಲಂಗಾಣ ಎನ್‌ಆರ್‌ಐ ಘಟಕದ ಪದಾಧಿಕಾರಿ ಇ.ಚಿಟ್ಟಿಬಾಬು ತಿಳಿಸಿದ್ದಾರೆ.

ADVERTISEMENT

ತೆಲಂಗಾಣ ಸರ್ಕಾರದ ಪ್ರಕಾರ,ವಿದೇಶಗಳಿಂದ ಬರುವ ಎಲ್ಲರನ್ನೂ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ಅಲ್ಲದೆ, ಅದಕ್ಕೆ ತಗಲುವ ವೆಚ್ಚವನ್ನು ಅವರೇ ನೀಡಬೇಕಾಗಿದೆ. 14 ದಿನಗಳ ಕ್ವಾರಂಟೈನ್‌ಗೆ ಸಾಮಾನ್ಯ ವಸತಿ ಸೌಕರ್ಯಕ್ಕೆ ₹5ಸಾವಿರ ಹಾಗೂ ಸ್ಟಾರ್ ಹೋಟೆಲ್‌ಗಳಿಗೆ ₹15 ಸಾವಿರದಿಂದ ₹30 ಸಾವಿರದವರೆಗೆ ನಿಗದಿಪಡಿಸಲಾಗಿದೆ ಎಂದು ಚಿಟ್ಟಿಬಾಬು ತಿಳಿಸಿದ್ದಾರೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣದ ನಿವಾಸಿಗಳನ್ನು ಕರೆತರಲು ಅಮೆರಿಕಾದಿಂದ ಹಾಗೂ ಬ್ರಿಟನ್‌ನಿಂದ ಒಂದೊಂದು ವಿಮಾನಗಳಲ್ಲಿ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಹೈದರಾಬಾದ್‌ ಅಬುದಾಬಿ ಹಾಗೂ ದುಬೈನಿಂದಲೂ ವಿಮಾನಗಳು ವಲಸೆ ಕಾರ್ಮಿಕರನ್ನು ಕರೆತರಲಿವೆ. ಲಕ್ಷಾಂತರಮಂದಿ ಜೀವನ ನಡೆಸಲು ಕೊಲ್ಲಿ ರಾಷ್ಟ್ರಗಳಿಗೆ ತೆರಳಿದ್ದಾರೆ. ಆದರೆ, ಅವರೆಲ್ಲಾ ಕ್ವಾರಂಟೈನ್ ಹಾಗೂ ವಿಮಾನದ ಪ್ರಯಾಣದ ವೆಚ್ಚವನ್ನು ನೀಡಲಾಗದೆ ಆಯಾ ರಾಷ್ಟ್ರಗಳಲ್ಲಿಯೇ ಉಳಿಯುವಂತಾಗಿದೆ ಎಂದು ಚಿಟ್ಟಿಬಾಬು ತಿಳಿಸಿದ್ದಾರೆ.

ಹಲವು ಜನರು ತೆಲಂಗಾಣಕ್ಕೆ ಹಿಂದಿರುಗಲು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಆದರೆ, ವಿಮಾನದ ವೆಚ್ಚ ಹಾಗೂ ಕ್ವಾರಂಟೈನ್ ವೆಚ್ಚಗಳನ್ನು ಆಯಾ ವ್ಯಕ್ತಿಗಳೇ ನೀಡಬೇಕೆಂದು ಗೊತ್ತಾದ ಕೂಡಲೆಹಿಂದಿರುಗಿದ್ದಾರೆ.ಇವರಲ್ಲಿ ಕೆಲವು ಮಂದಿಗೆ ತಮ್ಮ ಸಂಘದ ವತಿಯಿಂದ ಹಣವನ್ನು ನೀಡಿ ವಾಪಸ್ ಕರೆತಂದಿದ್ದೇವೆ ಎಂದು ತೆಲಂಗಾಣ ವಲಸೆ ಕಾರ್ಮಿಕ ಸಂಘದ ಅಧ್ಯಕ್ಷ ಪಿ.ಬಸಂತ್ ರೆಡ್ಡಿ ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಎಐಸಿಸಿ ವಕ್ತಾರ ದಾಸೋಜು ಸ್ರವಣ್ ಮಾಧ್ಯಮದೊಂದಿಗೆ ಮಾತನಾಡಿ, ಹಲವು ಮಂದಿ ಕೊರೊನಾದಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸವಿಲ್ಲದೆ ಕುಳಿತಿದ್ದಾರೆ. ಕೆಲವರು ಜೀವನ ನಡೆಸಲು ಪರದಾಡುತ್ತಿದ್ದಾರೆ. ಕೆಲವರಿಗೆ ಸರಿಯಾದ ಚಿಕಿತ್ಸೆ ಕೂಡ ಸಿಗದೆ ತುಂಬಾ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.ಇವರೆಲ್ಲಾ ಕೊರೊನಾ ಸೋಂಕು ಹರಡುವ ಭೀತಿಯಲ್ಲಿದ್ದಾರೆ.ಇಂತಹ ಸಮಯದಲ್ಲಿ ತೆಲಂಗಾಣ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ನಮ್ಮ ಜನರನ್ನು ಕರೆತರಲು ಸಹಾಯ ಮಾಡಬೇಕು. ಅಲ್ಲದೆ, ಪ್ರಯಾಣದ ವೆಚ್ಚ ಹಾಗೂ ಕ್ವಾರಂಟೈನ್ ವೆಚ್ಚಗಳನ್ನು ತುಂಬಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.