ವಿಶ್ವದ ಒಟ್ಟು 210 ದೇಶಗಳಲ್ಲಿ ಈವರೆಗೆ 3 ಕೋಟಿಗೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಒಟ್ಟು 9.47 ಲಕ್ಷ ಮಂದಿ ಕೋವಿಡ್-19ರಿಂದ ಮೃತಪಟ್ಟಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ವೇಗ ದೊರೆತಿದ್ದು, ವಿಶ್ವದ ವಿವಿಧೆಡೆ 3ನೇ ಹಂತದ ಕ್ಲಿನಿಕಲ್ ಟ್ರಯಲ್‌ಗಳು ಆರಂಭವಾಗಿವೆ. ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿದೆ.
ಅಮೆರಿಕದಲ್ಲಿ ವಿಶ್ವದಲ್ಲಿಯೇ ಅತಿಹೆಚ್ಚು ಸೋಂಕಿತರಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 7,012,141 ಇದ್ದರೆ, ಒಟ್ಟು ಮೃತರ ಸಂಖ್ಯೆ 204,190ಕ್ಕೆ ಮುಟ್ಟಿದೆ. ಸೋಮವಾರ ಒಂದೇ ದಿನ 7,373 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
5,523,917 ಸೋಂಕಿತರು ಇರುವ ಭಾರತ ಎರಡನೇ ಸ್ಥಾನದಲ್ಲಿದ್ದರೆ, 4,544,629 ಸೋಂಕಿತರಿರುವ ಬ್ರೆಜಿಲ್ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ ಈವರೆಗೆ 88,345 ಮಂದಿ ಮೃತಪಟ್ಟಿದ್ದರೆ, ಬ್ರೆಜಿಲ್‌ನಲ್ಲಿ 136,895 ಮಂದಿ ಸಾವನ್ನಪ್ಪಿದ್ದಾರೆ.
ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 1,109,595ಕ್ಕೆ ಮುಟ್ಟಿದೆ. ಈವರೆಗೆ 19,489 ಮಂಧಿ ಮೃತಪಟ್ಟಿದ್ದಾರೆ. ಪೆರು, ಕಾಂಬೊಡಿಯಾ, ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ಸ್ಪೇನ್ ಮತ್ತು ಅರ್ಜಟೀನಾ ದೇಶಗಳಲ್ಲಿ ಸೋಂಕು ಹೆಚ್ಚುತ್ತಿದೆ.
ಸ್ಪೇನ್‌ನಲ್ಲಿ ಸೋಂಕು ಮತ್ತೆ ಹೆಚ್ಚುತ್ತಿದೆ. ಕೊರೊನಾ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿರುವ ಇಸ್ರೇಲ್, ಪಿಲಿಪ್ಪೀನ್ಸ್ ಮತ್ತು ಬ್ರಿಟನ್‌ಗಳಲ್ಲಿ ಮತ್ತೆ ಲಾಕ್‌ಡೌನ್ ಪ್ರಸ್ತಾವ ಕೇಳಿಬರುತ್ತಿದೆ.
ಮಾಸ್ಕ್ ಧರಿಸುವುದು ಮತ್ತು ಅಂತರ ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಲಾಕ್‌ಡೌನ್ ವಿಧಿಸಬೇಕಾಗುತ್ತದೆ ಎಂದು ಹಲವು ದೇಶಗಳ ಸರ್ಕಾರಗಳು ಜನರನ್ನು ಎಚ್ಚರಿಸಿವೆ.
ಬ್ರಿಟನ್‌ನಲ್ಲಿ ಮತ್ತೆ ನಿರ್ಬಂಧ?
'ಬ್ರಿಟನ್‌ನಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಮತ್ತೆ ವಿಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ತಡಮಾಡಿದರೆ ಅಪಾಯವಾಗುತ್ತದೆ' ಎಂದು ಲಂಡನ್ ಇಂಪೀರಿಯಲ್ ಕಾಲೇಜಿನ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರಾಧ್ಯಾಪಕ ನೀಲ್ ಫರ್ಗುಸನ್ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿಹೇಳಿದ್ದಾರೆ.
ಬ್ರಿಟನ್‌ನಲ್ಲಿ ಕೊರೊನಾ ಸೋಂಕಿನ 2ನೇ ಅಲೆ ಕಾಣಿಸಿಕೊಂಡಿರುವ ಬಗ್ಗೆಪ್ರಧಾನಿ ಬೋರಿಸ್ ಜಾನ್ಸನ್ ಶುಕ್ರವಾರವಷ್ಟೇ ದೇಶವನ್ನು ಎಚ್ಚರಿಸಿದ್ದರು. ಈವರೆಗೆ ಬ್ರಿಟನ್‌ನಲ್ಲಿ ಒಟ್ಟು 3.98 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.41,788 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಪಿಲಿಪ್ಪೀನ್ಸ್:ಸಾರ್ವಜನಿಕ ಸಾರಿಗೆಯಲ್ಲಿ ಮಾತನಾಡುವಂತಿಲ್ಲ
ಸಾರ್ವಜನಿಕ ಸಾರಿಗೆಗಳಲ್ಲಿ ಮಾತನಾಡುವುದು, ಆಹಾರ ಸೇವಿಸುವುದನ್ನುಪಿಲಿಪ್ಪೀನ್ಸ್ ಸರ್ಕಾರ ನಿಷೇಧಿಸಿದೆ. ಬಸ್, ರೈಲು ಮತ್ತು ಇತರ ಸಮೂಹ ಸಾರಿಗೆಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 1 ಮೀಟರ್ (3 ಅಡಿ) ಅಂತರ ಕಾಪಾಡಿಕೊಳ್ಳಬೇಕು. ಫೇಸ್ ಶೀಲ್ಡ್ ಕಡ್ಡಾಯವಾಗಿ ಧರಿಸಬೇಕು. ಸದಾ ಕಾಲ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ.
ಪಿಲಿಪ್ಪೀನ್ಸ್‌ನಲ್ಲಿ ಈವರೆಗೆ 2.80 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 4,830 ಮಂದಿ ಮೃತಪಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದೀಚೆಗೆ ಸೋಂಕು ತೀವ್ರವಾಗಿ ಹೆಚ್ಚಾಗಿದೆ. ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಸಂಖ್ಯೆಗಳು ಕಳೆದ 30 ದಿನಗಳಲ್ಲಿ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.