ADVERTISEMENT

ಶ್ರೀಲಂಕಾ: ವೆಸಕ್‌ ಆಚರಣೆಗೆ ಕರ್ಫ್ಯೂ ತೆರವು

ರಾಯಿಟರ್ಸ್
Published 15 ಮೇ 2022, 19:39 IST
Last Updated 15 ಮೇ 2022, 19:39 IST
ರನಿಲ್‌ ವಿಕ್ರಮಸಿಂಘೆ
ರನಿಲ್‌ ವಿಕ್ರಮಸಿಂಘೆ   

ಕೊಲಂಬೊ, ಶ್ರೀಲಂಕಾ: ಪ್ರತಿಭಟನೆಯನ್ನು ಹತ್ತಿಕ್ಕಲು ದೇಶವ್ಯಾಪಿ ವಿಧಿಸಲಾಗಿದ್ದ ಕರ್ಫ್ಯೂವನ್ನು, ಬೌದ್ಧರ ಹಬ್ಬ ವೆಸಕ್‌ ಆಚರಿಸಲು ಅನುವು ಮಾಡಿಕೊಡಲುಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರ ನೇತೃತ್ವದ ಸರ್ಕಾರ ತೆರವುಗೊಳಿಸಿದೆ.

ಪ್ರಧಾನಿಯಾಗಿದ್ದ ಮಹೀಂದ್ರಾ ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಮೇ 9ರಂದು ಕರ್ಫ್ಯೂ ಹೇರಲಾಗಿತ್ತು. ಭಾನುವಾರ ದೇಶದಾದ್ಯಂತ ಬೌದ್ಧರ ಹಬ್ಬ ವೆಸಕ್‌ ಆಚರಿಸಲಾಯಿತು.

ವಿವಿಧ ಖಾಸಗಿ ಮತ್ತು ಸಾರ್ವಜನಿಕ ಕಟ್ಟಡದ ಮೇಲೆ ಬೌದ್ಧ ಧರ್ಮ ಬಿಂಬಿಸುವ ಬಾವುಟಗಳು ಹಾರಾಡಿದವು. ನಾಗರಿಕರು ಶ್ವೇತವಸ್ತ್ರ ಧರಿಸಿದ್ದು, ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬುದ್ಧ ಜಯಂತಿಯನ್ನು ವೆಸಕ್ ಎಂದು ಆಚರಿಸಲಾಗುತ್ತದೆ.

ADVERTISEMENT

ಸಂಪುಟ ರಚನೆ: ಈ ಮಧ್ಯೆ ನೂತನ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರು, ಸಂಪುಟಕ್ಕೆ ನಾಲ್ವರನ್ನು ಸೇರ್ಪಡೆ ಮಾಡಿದ್ದಾರೆ. ಈ ಎಲ್ಲರೂ ರಾಜಪಕ್ಸ ನೇತೃತ್ವದ ಶ್ರೀಲಂಕಾ ಪೊಡುಜನ ಪೆರುಮುನ ಪಕ್ಷದ ಸದಸ್ಯರಾಗಿದ್ದಾರೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದಲ್ಲಿ ಜನರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ನೂತನ ಪ್ರಧಾನಿ ನೇಮಕದ ನಂತರವೂ ಪ್ರತಿಭಟನೆಯ ಕಾವು ಇಳಿದಿಲ್ಲ.

ಈ ಮಧ್ಯೆ, ಅಧ್ಯಕ್ಷ ಗೋಟಬಯ ಅವರು ರಾಜೀನಾಮೆಗೆ ಆಗ್ರಹಿಸಿ ಒತ್ತಾಯಿಸಿ ಗಾಲ್‌ ಫೇಸ್‌ ಗ್ರೀನ್‌ನ ಬೀಚ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ರಾನಿಲ್‌ ಅವರು ಬೆಂಬಲ ಸೂಚಿಸಿದ್ದಾರೆ.

ಈ ಕುರಿತ ಹೇಳಿಕೆಯಲ್ಲಿ ಅವರು, ‘ಪ್ರತಿಭಟ‌ನಕಾರರ ಹಿತಾಸಕ್ತಿ ರಕ್ಷಿಸಲು ಸಮಿತಿ ರಚಿಸಲಾಗಿದೆ. ಭವಿಷ್ಯದ ನೀತಿ ರೂಪಿಸಲು ಯುವಜನರ ಅಭಿಪ್ರಾಯ ಪಡೆಯಲಾಗುವುದು. ದೇಶ ಮುನ್ನಡೆಸುವ ಹೊಣೆಯನ್ನು ಯುವ ಜನರು ತೆಗದುಕೊಳ್ಳಲಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.