ADVERTISEMENT

ವಿಕಾಸವಾದಿ ಡಾರ್ವಿನ್‌ರ ಟಿಪ್ಪಣಿ ಪುಸ್ತಕಗಳು 2 ದಶಕಗಳ ಬಳಿಕ ಪತ್ತೆ

ಏಜೆನ್ಸೀಸ್
Published 5 ಏಪ್ರಿಲ್ 2022, 12:42 IST
Last Updated 5 ಏಪ್ರಿಲ್ 2022, 12:42 IST
ಪತ್ತೆಯಾಗಿರುವ ಪುಸ್ತಕಗಳು
ಪತ್ತೆಯಾಗಿರುವ ಪುಸ್ತಕಗಳು    

ಲಂಡನ್‌: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಗ್ರಂಥಾಲಯದಿಂದ ಎರಡು ದಶಕಗಳ ಹಿಂದೆ ಕಳುವಾಗಿದ್ದ ಜೀವವಿಜ್ಞಾನಿ, ವಿಕಾಸವಾದಿ ಚಾರ್ಲ್ಸ್‌ ಡಾರ್ವಿನ್ ಅವರ ಎರಡು ಟಿಪ್ಪಣಿ ಪುಸ್ತಕಗಳು ಈಗ ಪತ್ತೆಯಾಗಿವೆ.

‘ಡಾರ್ವಿನ್ನರ ಪುಸ್ತಗಳನ್ನು ಯಾರೊ ಉಡುಗೊರೆ ಚೀಲದಲ್ಲಿಟ್ಟು ಗ್ರಂಥಾಲಯದಲ್ಲಿ ಇರಿಸಿ ಹೋಗಿದ್ದಾರೆ’ ಎಂದು ವಿಶ್ವವಿದ್ಯಾಲಯವು ಮಂಗಳವಾರ ಹೇಳಿದೆ. ಜೊತೆಗೆ, ಗ್ರಂಥಪಾಲಕರಿಗೆ ಈಸ್ಟರ್ ಶುಭಾಶಯಗಳನ್ನು ಕೋರಿದ ಚೀಟಿಯನ್ನು ಪುಸ್ತಕಗಳೊಂದಿಗೆ ಇರಿಸಲಾಗಿತ್ತು ಎಂದು ವಿವಿಯು ತಿಳಿಸಿದೆ.

ಜೀವವಿಕಾಸಕ್ಕೆ ಸಂಬಂಧಿಸಿದ ಡಾರ್ವಿನ್ನರ 1837ರ ‘ಟ್ರೀ ಆಫ್ ಲೈಫ್‘ ಚಿತ್ರವನ್ನು ಈ ಪುಸ್ತಕಗಳು ಒಳಗೊಂಡಿದ್ದವು. ಈ ಪುಸ್ತಕಗಳ ಛಾಯಾಚಿತ್ರ ಪ್ರತಿಗಾಗಿ ಗ್ರಂಥಾಲಯವು 2001ರಲ್ಲಿ ಅವುಗಳನ್ನು ಹೊರತೆಗೆದಿತ್ತು. ಅಂದಿನಿಂದ ಪುಸ್ತಗಳು ಕಾಣೆಯಾಗಿದ್ದವು. ಡಾರ್ವಿನ್ನರ ಪುಸ್ತಕಗಳನ್ನು ಸಿಬ್ಬಂದಿಯು ಬೇರೆ ಪುಸ್ತಕಗಳ ನಡುವೆ ತಪ್ಪಾಗಿ ಇರಿಸಿರುವ ಸಾಧ್ಯತೆಗಳಿವೆ ಎಂದು ನಂಬಲಾಗಿತ್ತು. ಗ್ರಂಥಾಲಯದ ಒಂದು ಕೋಟಿ ಪುಸ್ತಕಗಳಲ್ಲಿ ಡಾರ್ವಿನ್ನರ ಟಿಪ್ಪಣಿ ಪುಸ್ತಕಕ್ಕಾಗಿ ಜಾಲಾಟ ನಡೆದಿತ್ತು. ಆದರೆ, ಅವುಗಳು ಪತ್ತೆಯಾಗಿರಲ್ಲಿಲ್ಲ. ಹೀಗಾಗಿ, ಪುಸ್ತಕಗಳು ಕಳುವಾಗಿರುವುದಾಗಿ ಅಕ್ಟೋಬರ್ 2020ರಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ADVERTISEMENT

ಸ್ಥಳೀಯ ತನಿಖಾಧಿಕಾರಿಗಳು ಈ ಬಗ್ಗೆ ಇಂಟರ್‌ಪೋಲ್‌ಗೆ ಸೂಚನೆ ನೀಡಿದ್ದರು. ಅಮೂಲ್ಯ ನೋಟ್‌ಬುಕ್‌ಗಳಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹುಡುಕಾಟ ಆರಂಭವಾಗಿತ್ತು.

ಈ ಮಧ್ಯೆ, ‘ಮಾರ್ಚ್ 9 ರಂದು ಪುಸ್ತಕಗಳು ಪತ್ತೆಯಾಗಿವೆ’ ಎಂದು ವಿಶ್ವವಿದ್ಯಾಲಯ ಹೇಳಿದೆ. ಕಟ್ಟಡದ ಸಾರ್ವಜನಿಕ ಪ್ರದೇಶದಲ್ಲಿ, ಗ್ರಂಥಪಾಲಕರ ಕಚೇರಿಯ ಹೊರಗೆ, ಭದ್ರತಾ ಕ್ಯಾಮೆರಾಗಳಿಲ್ಲದ ಪ್ರದೇಶದಲ್ಲಿ ಎರಡು ನೋಟ್‌ಬುಕ್‌ಗಳನ್ನು ಇಟ್ಟು ಹೋಗಲಾಗಿತ್ತು. ಪುಸ್ತಕಗಳಿಗೆ ಯಾವುದೇ ಹಾನಿಯಾಗಿರಲಿಲ್ಲ ಎಂದು ವಿವಿ ಹೇಳಿದೆ. ಇದರ ಜೊತೆಗೇ, ‘ಗ್ರಂಥಪಾಲಕರೇ ಈಸ್ಟರ್‌ನ ಶುಭಾಶಯಗಳು’ ಎಂದು ಸಂದೇಶ ಬರೆದಿಡಲಾಗಿತ್ತು ಎಂದು ವಿವಿ ತಿಳಿಸಿದೆ.

‘ಎಚ್‌ಎಂಎಸ್‌ ಬೀಗಲ್‌’ ಹೆಸರಿನ ನೌಕೆಯಲ್ಲಿ ಪ್ರಪಂಚ ಪರ್ಯಾಟನೆ ನಡೆಸಿ ಹಿಂದಿರುಗಿದ ನಂತರ ಡಾರ್ವಿನ್‌ ತಮ್ಮ ಚಿಂತನೆಗಳನ್ನು ಈ ನೋಟ್‌ ಪುಸ್ತಕಗಳಲ್ಲಿ ಬರೆದಿಟ್ಟಿದ್ದರು. ವಿಕಾಸವಾದದ ಕುರಿತಾದ ಅವರ ‘ಆನ್ ದಿ ಆರಿಜಿನ್ ಆಫ್ ಸ್ಪೀಸೀಸ್’ ನ ಆಲೋಚನೆಗಳಿಗೆ ಈ ಪುಸ್ತಕದಲ್ಲಿನ ಉಲ್ಲೇಖಗಳು ಇಂಬು ನೀಡುತ್ತಿದ್ದವು ಎಂದು ವಿಶ್ವವಿದ್ಯಾಲಯ ಹೇಳಿದೆ.

ನೋಟ್‌ಬುಕ್‌ಗಳು ಜುಲೈನಿಂದ ಗ್ರಂಥಾಲಯದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಸಿಗಲಿವೆ ಎಂದು ಗ್ರಂಥಾಲಯದ ಅಧಿಕಾರಿಗಳು ಹೇಳಿದ್ದಾರೆ.

ಕೇಂಬ್ರಿಡ್ಜ್‌ಶೈರ್ ಪೋಲೀಸರು ತಮ್ಮ ತನಿಖೆಯನ್ನು ಮುಂದುವರೆಸಿದ್ದಾರೆ. ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇದ್ದರೂ ಒದಗಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.