ADVERTISEMENT

ಡೆಲ್ಟಾ ರೂಪಾಂತರ ತಳಿಯಿಂದ ಮತ್ತೊಂದು ಕೋವಿಡ್‌ ಅಲೆ?

ಇಸ್ರೇಲ್‌ನಲ್ಲಿ ನಡೆದ ಸಂಶೋಧನೆಯಿಂದ ಹೊರಬಿದ್ದ ಮಾಹಿತಿ

ಪಿಟಿಐ
Published 4 ಮೇ 2022, 13:34 IST
Last Updated 4 ಮೇ 2022, 13:34 IST
ಕೋವಿಡ್‌ (ಸಾಂದರ್ಭಿಕ ಚಿತ್ರ)
ಕೋವಿಡ್‌ (ಸಾಂದರ್ಭಿಕ ಚಿತ್ರ)   

ಜೆರುಸಲೇಮ್‌: ಮುಂದಿನ ಎರಡು ತಿಂಗಳಲ್ಲಿ ಓಮೈಕ್ರಾನ್‌ ಉಪತಳಿಗಳು ಸ್ವತಃ ನಾಶವಾಗಬಹುದು, ಇಲ್ಲವೇ ಈ ಬೇಸಿಗೆಯಲ್ಲಿ ಮತ್ತೊಂದು ಡೆಲ್ಟಾ ತಳಿ ಅಥವಾ ವಿಭಿನ್ನ ಕೋವಿಡ್‌ ಪಿಡುಗು ಉಲ್ಬಣಗೊಳ್ಳಬಹುದು ಎಂದು ಇಸ್ರೇಲ್‌ನಲ್ಲಿ ನಡೆಸಲಾದ ಮಾದರಿ ಅಧ್ಯಯನವೊಂದು ಹೇಳಿದೆ.

‘ಸೈನ್ಸ್‌ ಆಫ್‌ ದಿ ಟೋಟಲ್‌ ಎನ್ವಿರಾನ್‌ಮೆಂಟ್‌’ ಪತ್ರಿಕೆಯಲ್ಲಿ ಕಳೆದ ವಾರ ಈ ಸಂಶೋಧನಾ ವರದಿ ಪ್ರಕಟವಾಗಿದೆ. ಡೆಲ್ಟಾ ತನ್ನ ಹಿಂದಿನ ರೂಪಾಂತರ ತಳಿಗಳನ್ನು ನಾಶಗೊಳಿಸಿದೆ. ಆದರೆ ಮಾರಣಾಂತಿಕ ಓಮೈಕ್ರಾನ್‌ ತಳಿಯು ಇನ್ನೂ ಮರೆಯಾಗಿಲ್ಲ. ಅದು ಮತ್ತೆ ಕಾಣಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇಸ್ರೇಲ್‌ನ ನೆಗೆವ್‌ನಲ್ಲಿಯ ಬೆನ್‌–ಗುರಿಯನ್‌ ವಿಶ್ವವಿದ್ಯಾಲಯದ (ಬಿಜಿಯು) ಸಂಶೋಧಕರು ಸೂಕ್ಷ್ಮ ರಚನೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವು ತ್ಯಾಜ್ಯ ನೀರಿನಲ್ಲಿಯ ತಳಿಗಳನ್ನು ಪ್ರತ್ಯೇಕಿಸುತ್ತವೆ. ಪಿಸಿಆರ್‌ ಮತ್ತು ರ‍್ಯಾಪಿಡ್‌ ಪರೀಕ್ಷೆಗಳು ಕಡಿಮೆಯಾದಾಗಲೂ ಕೊರೊನಾ ಸೋಂಕು ಎಲ್ಲಿ ಸಕ್ರಿಯವಾಗಿದೆ ಎಂಬ ಸೂಚನೆ ಇದರಿಂದ ದೊರೆಯುತ್ತದೆ.

ADVERTISEMENT

ಸಂಶೋಧಕರು 2021ರ ಡಿಸೆಂಬರ್ ನಿಂದ 2022ರಜನವರಿ ವರೆಗೆ ಇಸ್ರೇಲ್‌ನ ಬೀರ್-ಶೇವಾ ನಗರದಲ್ಲಿ ಒಳಚರಂಡಿಯನ್ನು ಪರಿಶೀಲನೆ ನಡೆಸಿದರು.ಓಮೈಕ್ರಾನ್ ಮತ್ತು ಡೆಲ್ಟಾ ರೂಪಾಂತರ ತಳಿಗಳ ನಡುವಿನ ಕ್ರಿಯೆಯನ್ನು ಪತ್ತೆ ಹಚ್ಚಿದರು.ಈ ಅಂಶಗಳ ಮೂಲಕ ಸಂಶೋಧಕರು ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

‘ಈ ಬೇಸಿಗೆಯಲ್ಲಿ ಮತ್ತೊಂದು ಡೆಲ್ಟಾ ಅಥವಾ ಕೊರೊನಾ ಉಪತಳಿಯು ಉಲ್ಬಣಗೊಳ್ಳಬಹುದು ಎಂದು ಸಂಶೋಧನೆಯ ಮಾದರಿ ಸೂಚಿಸುತ್ತದೆ’ ಎಂದು ಬಿಜಿಯುನಪ್ರೊಫೆಸರ್ ಏರಿಯಲ್ ಕುಶ್ಮಾರೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಹೊಸದಾದ ಪ್ರಬಲ ರೂಪಾಂತರ ತಳಿಯು ಕಾಣಿಸಿಕೊಂಡಾಗ ಸ್ವಲ್ಪ ಸಮಯದ ನಂತರ ಅದು ಹಿಂದಿನ ತಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.