ವಾಷಿಂಗ್ಟನ್: ಕೊರೊನಾದ ಡೆಲ್ಟಾ ರೂಪಾಂತರ ತಳಿಯು ಚಿಕನ್ ಪಾಕ್ಸ್‌ನಂತೆ ವೇಗವಾಗಿ ಹರಡಲಿದೆ ಎಂದು ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರದ (ಸಿಡಿಸಿ) ಆಂತರಿಕ ದಾಖಲೆಗಳಲ್ಲಿ ಉಲ್ಲೇಖವಾಗಿರುವುದಾಗಿ ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಅಮೆರಿಕವಲ್ಲದೆ, ವಿಶ್ವದ ಇತರ ದೇಶಗಳಲ್ಲೂ ಪ್ರಕರಣಗಳ ಏರಿಕೆಗೆ ಡೆಲ್ಟಾ ರೂಪಾಂತರ ತಳಿಯೇ ಕಾರಣ ಎಂದು ಅಭಿಪ್ರಾಯಪಡಲಾಗಿದೆ.
‘ಮಕ್ಕಳನ್ನು ಗುರಿಯಾಗಿಸಿಲ್ಲ’
ಡಬ್ಲ್ಯುಎಚ್‌ಒ: ಡೆಲ್ಟಾ ರೂಪಾಂತರ ತಳಿಯು ನಿರ್ದಿಷ್ಟವಾಗಿ ಮಕ್ಕಳನ್ನಷ್ಟೇ ಗುರಿಯಾಗಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.
‘ಜನ ಗುಂಪು ಸೇರುವಲ್ಲಿ ಹೆಚ್ಚು ಹರಡುತ್ತಿರುವುದು ಕಂಡುಬಂದಿದೆ ಎಂದು ಡಬ್ಲ್ಯುಎಚ್‌ಒ ಕೋವಿಡ್ ತಾಂತ್ರಿಕ ತಂಡದ ಮುಖ್ಯಸ್ಥೆ, ಅಮೆರಿಕದ ತಜ್ಞೆ ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ. ಡೆಲ್ಟಾ ರೂಪಾಂತರ ತಳಿಯು ಸದ್ಯ 132 ದೇಶಗಳಲ್ಲಿ ಪತ್ತೆಯಾಗಿದೆ’ ಎಂದಿದ್ದಾರೆ.
ನಿಯಮ ಪಾಲಿಸದಿದ್ದರೆ ಪರ್ಮಿಟ್ ರದ್ದು
ಸಿಂಗಪುರ (ಪಿಟಿಐ): ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸದ ಪ್ರಜೆಗಳ ಪರ್ಮಿಟ್ ಹಾಗೂ ದೀರ್ಘಾವಧಿ ಪಾಸ್ ಹೊಂದಿದ್ದರೆ ಅದನ್ನು ರದ್ದುಪಡಿಸಲಾಗುವುದು ಎಂದು ಸಿಂಗಪುರ ಶನಿವಾರ ಎಚ್ಚರಿಸಿದೆ.
ಆರೋಗ್ಯ ಸಚಿವಾಲಯ ಈ ಕುರಿತು ಹೇಳಿಕೆ ನೀಡಿದೆ. ಆಸ್ಟ್ರೇಲಿಯ ಮತ್ತು ಚೀನಾದ ಜಿಯಾಂಗ್ಸು ಪ್ರಾಂತ್ಯದಿಂದ ಜನರ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದ ಹಿಂದೆಯೇ ಇಂಥ ಎಚ್ಚರಿಕೆ ಹೊರಬಿದ್ದಿದೆ.
ಹೊಸ ನಿಯಮ ಸೋಮವಾರ ಜಾರಿಗೆ ಬರಲಿದೆ.
ಪಾಕ್- ಕರಾಚಿ ಸೇರಿ ವಿವಿಧೆಡೆ ಲಾಕ್‌ಡೌನ್
ಇಸ್ಲಾಮಾಬಾದ್: ಕೋವಿಡ್ ಪ್ರಕರಣಗಳ ಏರುಗತಿ ಹಿನ್ನೆಲೆಯಲ್ಲಿ ಪಾಕಿಸ್ತಾನವು, ಕರಾಚಿ ಸೇರಿದಂತೆ ಸಿಂಧ್ ಪ್ರಾಂತ್ಯದ ವಿವಿಧ ನಗರಗಳಲ್ಲಿ ಆಗಸ್ಟ್ 8ರವರೆಗೂ ಲಾಕ್‌ಡೌನ್ ಘೊಷಿಸಿದೆ. ಸ್ಥಳೀಯ ಸರ್ಕಾರ ಮತ್ತು ಉದ್ಯಮ ಪ್ರತಿನಿಧಿಗಳ ವಿರೋಧದ ನಡುವೆಯೂ ಈ ಲಾಕ್‌ಡೌನ್ ನಿರ್ಧಾರ ಪ್ರಕಟಿಸಲಾಗಿದೆ.
ಚೀನಾ- 15 ನಗರಗಳಲ್ಲಿ ಸೋಂಕು ಏರುಮುಖ
ಬೀಜಿಂಗ್ (ಪಿಟಿಐ): ಚೀನಾದಲ್ಲಿ ಏಕಾಏಕಿ ರಾಜಧಾನಿ ಬೀಜಿಂಗ್ ಮತ್ತು ಇತರೆ 14 ನಗರಗಳಲ್ಲಿ ಪ್ರಕರಣಗಳು ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ಜಿಯಾಂಗ್ಸು ಪ್ರಾಂತ್ಯದ ರಾಜಧಾನಿ ನಾಂಜಿಂಗ್‌ನಲ್ಲಿ ಮೊದಲಿಗೆ ಏರಿಕೆ ದಾಖಲಾಯಿತು. ಬಳಿಕ ಬೀಜಿಂಗ್ ಸೇರಿ ಐದು ಪ್ರಾಂತ್ಯಗಳಿಗೂ ವಿಸ್ತರಣೆಯಾಯಿತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾಂಜಿಂಗ್ ವಿಮಾನಯಾನ ಸೇವೆಯನ್ನು ರದ್ದುಪಡಿಸಿದೆ.
ಶವಗಳ ಇಡಲು ಶೀತಲೀಕರಣ ಘಟಕ
ಬ್ಯಾಂಕಾಕ್ (ರಾಯಿಟರ್ಸ್): ಕೋವಿಡ್ ಸಾವು ಪ್ರಕರಣಗಳು ಹೆಚ್ಚಿದಂತೆ ಇಲ್ಲಿನ ಆಸ್ಪತ್ರೆಗಳು ಶವಗಳನ್ನು ಇಡಲು ಶೀತಲೀಕರಣ ಘಟಕಗಳ ಮೊರೆ ಹೋಗಿವೆ. 2004ರಲ್ಲಿ ಸುನಾಮಿ ವೇಳೆಯೂ ಇದೇ ಕ್ರಮವನ್ನು ಅನುಸರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.